ಹಾಲುಮತ ಸಮಾಜದವರು ಈ ಬಾರಿ ಶಾಸಕರಾಗಬೇಕು-ಶಾಂತಗೌಡ ಖಿಲಾರಹಟ್ಟಿಯಲ್ಲಿ ಶ್ರೀ ಬೀರಲಿಂಗೇಶ್ವರ, ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ: ಉಚಿತ ಸಾಮೂಹಿಕ ವಿವಾಹ: ಧರ್ಮಸಭೆ: ಮದರಿ ನೇತೃತ್ವ

MK HasiruKranti
ಹಾಲುಮತ ಸಮಾಜದವರು ಈ ಬಾರಿ ಶಾಸಕರಾಗಬೇಕು-ಶಾಂತಗೌಡ ಖಿಲಾರಹಟ್ಟಿಯಲ್ಲಿ ಶ್ರೀ ಬೀರಲಿಂಗೇಶ್ವರ, ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ: ಉಚಿತ ಸಾಮೂಹಿಕ ವಿವಾಹ: ಧರ್ಮಸಭೆ: ಮದರಿ ನೇತೃತ್ವ
WhatsApp Group Join Now
Telegram Group Join Now
ಮುದ್ದೇಬಿಹಾಳ: ಹಾಲುಮತ ಸಮಾಜದವರು ಕಾಯಕನಿಷ್ಠೆಗೆ ಹೆಸರಾದವರು. ರಾಜಕಾರಣಿಗಳು ಇವರನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಬೆಳೆಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಹಾಲುಮತ ಸಮಾಜದವರು ಶಾಸಕರಾಗಬೇಕು. ಆ ನಿಟ್ಟಿನಲ್ಲಿ ಹಾಲುಮತ ಸಮಾಜದ ಹಿರಿಯರು ಒಗ್ಗಟ್ಟಾಗಿ ಕ್ರಿಯಾಶೀಲ ಯುವಕರಿಗೆ, ಸಮಾಜಸೇವಕರಿಗೆ ತಮ್ಮ ಶಕ್ತಿಯನ್ನು ಧಾರೆ ಎರೆದು ಕೊಡುವ ಮೂಲಕ ಹಾಲುಮತ ಸಮಾಜದವರು ವಿಧಾನಸೌಧದ ಮೆಟ್ಟಿಲು ಏರುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಮದರಿ(ಪೂಜಾರಿ) ಕುಟುಂಬದವರ ನೇತೃತ್ವದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಶ್ರೀ ಬೀರಲಿಂಗೇಶ್ವರ, ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ, ಉಚಿತ ಸಾಮೂಹಿಕ ವಿವಾಹ, ಧರ್ಮಸಭೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಾಲುಮತ ಸಮಾಜದವರು ಎಲ್ಲರೊಂದಿಗೆ ಬೆರೆತು ಭವಿಷ್ಯ ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಸಮಾಜ ಸೇವಕ ಎಂ.ಎನ್.ಮದರಿ ಅವರಿಗೆ ಶಕ್ತಿ ಇದೆ. ಇವರನ್ನು ಎಲ್ಲರೂ ಒಗ್ಗಟ್ಟಾಗಿ ಬೆಳೆಸಬೇಕು. ಹಾಲುಮತ ಸಮಾಜದವರು ಬೆಳೆಯಲು ಸ್ವಂತ ಶಕ್ತಿಯನ್ನು ಅವಲಂಬಿಸಬೇಕೆ ಹೊರತು ಯಾವ ರಾಜಕಾರಣಿಯನ್ನೂ ಅವಲಂಬಿಸಬಾರದು. ಸಮಾಜದಲ್ಲಿ ಒಳ್ಳೇಯ ಕೆಲಸ ಮಾಡುವವರು ಕಡಿಮೆಯಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಎಂ.ಎನ್.ಮದರಿ ಅವರಂಥವರು ಸಾಕಷ್ಟು ಸಮಾಜ ಮತ್ತು ಶೈಕ್ಷಣಿಕ ಸೇವೆ ಮೂಲಕ ಗುರ್ತಿಸಿಕೊಂಡಿದ್ದಾರೆ. ನಾಲ್ಕೂ ದಿಕ್ಕಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಉಚಿತ ಶಿಕ್ಷಣದ ಕ್ರಾಂತಿ ಮಾಡಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಇವರು ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರು ಮಾತನಾಡಿ, ಮಕ್ಕಳಿಗೆ ಸರಿಯಾದ ದಾರಿ ಕಲಿಸಿಕೊಡುವ ಜವಾಬ್ಧಾರಿ ಹಿರಿಯರ ಮೇಲಿದೆ. ಸತ್ಯ, ಅಸತ್ಯ, ಒಳ್ಳೇಯದ್ದು, ಕೆಟ್ಟದ್ದು, ಜನರ ಪ್ರೀತಿ ಗಳಿಸುವುದು ಯಾವುದು, ಜನರಿಂದ ದೂರ ಆಗುವುದು ಯಾವುದು ಎನ್ನುವುದನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಿಕೊಡುವುದು ತಂದೆ, ತಾಯಿ ಜವಾಬ್ಧಾರಿ. ನವ ದಂಪತಿಗಳು ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ಇವೆಲ್ಲ ಸತ್ಸಂಪ್ರದಾಯ ಕಲಿಸಿಕೊಡಬೇಕು ಎಂದರು.
ಸಮಾರಂಭದ ರೂವಾರಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಅವರು ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದಿಂದ ನಮ್ಮ ಮನೆ ದೇವರ ಹೆಸರಿನಲ್ಲಿ ಜಾತ್ರೆ, ಸಾಮೂಹಿಕ ವಿವಾಹ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುರಪೂರ ತಾಲೂಕು ಮಾರನಾಳ ಗ್ರಾಮದ ಶ್ರೀ ಬೀರಲಿಂಗೇಶ್ವರ ನಮ್ಮ ಮನೆಯ ದೇವರಾಗಿದ್ದು ಖಿಲಾರಹಟ್ಟಿಯಲ್ಲಿಯೇ ಶ್ರೀ ಬೀರಲಿಂಗೇಶ್ವರನಿಗೆ ದೇವಸ್ಥಾನ ಕಟ್ಟಿಸಿದ್ದೇವೆ. ಸಮಾಜಸೇವೆ, ಧಾರ್ಮಿಕ ಕಾರ್ಯ, ಶೈಕ್ಷಣಿಕ ಸೇವೆ ನಮಗೆ ಸಂತೃಪ್ತಿ ನೀಡುವಂಥವುಗಳಾಗಿವೆ ಎಂದರು.
ದಿವ್ಯಸಾನಿಧ್ಯ ವಹಿಸಿದ್ದ ಅಗತೀರ್ಥ ಶಾಖಾ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಜಾತ್ರೆಯಂದು ಬಲಿ ಕೊಡುವ ಪದ್ಧತಿ ನಿಲ್ಲಬೇಕು. ಎಲ್ಲರೂ ಚಟಗಳಿಂದ ಮುಕ್ತರಾಗಿ ಸುಂದರ ಬದುಕು ಸಾಗಿಸಬೇಕು. ಮಾನವ ಜನ್ಮ ಶ್ರೇಷ್ಠವಾದದ್ದು ಇದನ್ನು ಹಾಳು ಮಾಡಿಕೊಳ್ಳಬಾರದು. ಶರೀರ ಶಾಸ್ವತವಲ್ಲ ಸಾಧನೆ ಶಾಸ್ವತ ಎನ್ನುವುದನ್ನು ಮನಗಾಣಬೇಕು. ದಿನದಿಂದ ದಿನಕ್ಕೆ ಆಯುಷ್ಯ ಕಡಿಮೆಯಾಗುತ್ತದೆ ಎನ್ನುವುದನ್ನು ಅರಿತುಕೊಂಡು ಸಮಾಜಕ್ಕೆ ಉಪಯುಕ್ತರಾಗಿ ಬದುಕಬೇಕು ಎಂದರು.
ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಅಶೀರ್ವಚನ ನೀಡಿ, ನಿಜವಾದ ಶ್ರೀಮಂತಿಕೆ ದಾನ, ಧರ್ಮದಂಥ ಪುಣ್ಯದ ಕಾರ್ಯದಲ್ಲಿದೆ. ಹಾಲುಮತ ಸಮಾಜದವರು ಕುರಿ ಕಾಯ್ದು ದುಡಿಮೆ ಮಾಡುವರೇ ಹೊರತು ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು ಜೀವಿಸುವಂಥವರಲ್ಲ. ಜನರು ಮಾವಿನ ಗಿಡಕ್ಕೆ ಕಲ್ಲು ಹೊಡೆಯುವರೇ ಹೊರತು ಬೇವಿನ ಗಿಡಕ್ಕೆ ಕಲ್ಲು ಹೊಡೆಯಲ್ಲ ಎನ್ನುವ ಶರಣರ ವಾಣಿಯ ಹಿಂದಿನ ನೀತಿ ಅರಿತುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದನಕೊಳ್ಳದ ಡಾ|ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಎನ್.ಎಸ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯರಝರಿಯ ಮಲ್ಲಾರಲಿಂಗ ಪ್ರಭುಗಳು, ಸರೂರಿನ ಶಿವಯ್ಯ ಗುರುವಿನ, ಖಿಲಾರಹಟ್ಟಿಯ ರಮಾನಂದ ಸ್ವಾಮೀಜಿ, ಸಿದ್ದಾಪೂರದ ಅರವಿಂದ ಒಡೆಯರ್ ಸ್ವಾಮೀಜಿ, ಸಾಲವಾಡಗಿಯ ದೊಡ್ಡ ಸಣ್ಣೆಕಪ್ಪ ಮುತ್ಯಾ, ತಿಂಥಣಿ ಬ್ರಿಜ್‌ನ ಸಿದ್ದಬೀರ ದೇವರು, ಬಿ.ಜಿ.ಜಗ್ಗಲ್ ವಕೀಲರು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆ‌ರ್.ಬಿರಾದಾರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ.ಬಿರಾದಾರ, ಜಿಪಂ ಮಾಜಿ ಸದಸ್ಯರಾದ ಎನ್.ಎಸ್.ಬಪ್ಪರಗಿ, ಬಿ.ಎಸ್.ಶಿರೋಳ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಮಿಣಜಗಿ ಗುತ್ತಿಗೆದಾರ ಎಚ್‌.ಎಮ್.ನಾಯಕ, ಎಂ.ಎಸ್.ಬೊಮ್ಮನಹಳ್ಳಿ, ಪುರಸಭೆ ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಯರಝರಿ ಕಾಂಗ್ರೆಸ್ ಮುಖಂಡ ಮಲ್ಲಣ್ಣ ಅಪರಾಧಿ, ನಾಗರಬೆಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಮಪ್ಪಗೌಡ ಪ್ಯಾಟಿ, ತಾಳಿಕೋಟಿ ಕುರುಬರ ಸಂಘದ ಅಧ್ಯಕ್ಷ ಸಾಯಬಣ್ಣ ಆಲ್ಯಾಳ, ಹುಲ್ಲೂರ ಕಾಂಗ್ರೆಸ್‌ ಧುರೀಣ ಸುರೇಶ ಹಳೇಮನಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ ಸೇರಿ ಹಲವರು ಹಲವರು ವೇದಿಕೆಯಲ್ಲಿದ್ದರು.
22 ಜೋಡಿ ನವದಂಪತಿಗಳು ಸತಿಪತಿಗಳಾಗುವ ಮೂಲಕ ನವ ದಾಂಪತ್ಯ ಜೀಟನಕ್ಕೆ ಕಾಲಿಟ್ಟರು. ಇದೇ ವೇಳೆ ಬಸವನ ಬಾಗೇವಾಡಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಸಾಹಿತಿ, ಚಿಂತಕ ವೀರೇಶ ಗೂಡ್ಲಮನಿ ಅವರು ರಚಿಸಿದ ಚರಿತ್ರೆಯ ಪುಸ್ತಕ ಮಹಿಮಾಂತಕ ಶ್ರೀ ಮನ್ನೀರೇಶ್ವರ ಕೃತಿಯನ್ನು ಗಣ್ಯರು, ಸ್ವಾಮೀಜಿಗಳು ಲೋಕಾರ್ಪಣೆಗೊಳಿಸಿದರು.
ವೀರೇಶ ಗೂಡ್ಲಮನಿ ಸ್ವಾಗತಿಸಿದರು. ವೈ.ಎಚ್.ವಿಜಯಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲು ಹಡಲಗೇರಿ ನಿರೂಪಿಸಿದರು. ಭೀಮಣ್ಣ ತಳವಾರ ವಂದಿಸಿದರು. ಜಾತ್ರೆಯ ಅಂಗವಾಗಿ ಟಗರಿನ ಕಾಳಗ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನೆರವೇರಿದವು. ಮಾರನಾಳ, ಕಣಕಾಲ, ಇವಣಗಿ, ವಡವಡಗಿ, ನಾಗರಾಳ, ಖಿಲಾರಹಟ್ಟಿ, ನಾಗರಬೆಟ್ಟ, ಅಡವಿ ಸೋಮನಾಳ, ಗೋನಾಳ, ಎಣ್ಣಿವಡಗೇರಿ, ಅಮರಗೋಳ ಗ್ರಾಮಗಳಿಂದ ದೇವರ ಪಲ್ಲಕ್ಕಿಗಳು ಖಿಲಾರಹಟ್ಟಿಗೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದವು.
WhatsApp Group Join Now
Telegram Group Join Now
Share This Article