ಚನ್ನಮ್ಮನ ಕಿತ್ತೂರು: ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಅಭೂತಪೂರ್ವ ಪ್ರಗತಿ: ರೈತರಿಗೆ ಶೇ. 90ರಷ್ಟು ಕಬ್ಬಿನ ಬಿಲ್ ಪಾವತಿ ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸಭೆಯು ಗುರುವಾರ ಕಚೇರಿ ಆವರಣದಲ್ಲಿ ಜರುಗಿದ್ದು, 2025-26ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಯು ಸಾಧಿಸಿರುವ ಅಭೂತಪೂರ್ವ ಪ್ರಗತಿಯ ಕುರಿತು ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರು ವಿವರಣೆ ನೀಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬು ನುರಿಸುವಿಕೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಭಾರಿ ಏರಿಕೆ ಕಂಡಿರುವ ಕಾರ್ಖಾನೆಯು, ಮಾರ್ಚ್ 19ರವರೆಗೆ ಅಂದರೆ ಕೇವಲ 80 ದಿನಗಳಲ್ಲಿ ಒಟ್ಟು 2,33,115 ಮೆಟ್ರಿಕ್ ಟನ್ ಕಬ್ಬನ್ನು ನುರಿಸುವ ಮೂಲಕ ಕಳೆದ ಬಾರಿಗಿಂತ ಸುಮಾರು 70 ಸಾವಿರ ಮೆಟ್ರಿಕ್ ಟನ್ ಅಧಿಕ ಸಾಧನೆ ಮಾಡಿದೆ. ಸಕ್ಕರೆ ಇಳುವರಿಯು (ರಿಕವರಿ) ಶೇ. 11.09 ರಿಂದ ಶೇ. 11.31ಕ್ಕೆ ಏರಿಕೆಯಾಗಿದ್ದು, ಒಟ್ಟು 2,63,744 ಕ್ವಿಂಟಾಲ್ ಸಕ್ಕರೆಯನ್ನು ಉತ್ಪಾದಿಸಲಾಗಿದೆ. ರೈತರಿಗೆ ಪಾವತಿಸಬೇಕಾದ ಒಟ್ಟು 75.76 ಕೋಟಿ ರೂಪಾಯಿ ಕಬ್ಬಿನ ಬಿಲ್ನಲ್ಲಿ ಈಗಾಗಲೇ ಶೇ. 90ರಷ್ಟು ಅಂದರೆ 65.84 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಬಾಕಿ ಇರುವ 9.92 ಕೋಟಿ ರೂಪಾಯಿ ಹಣವನ್ನು ಪಾವತಿಸಲು ಅಗತ್ಯವಿರುವಷ್ಟು ಸಕ್ಕರೆ ಮತ್ತು ಐದು ಸಾವಿರ ಟನ್ ಬಗ್ಯಾಸ್ ದಾಸ್ತಾನು ಕಾರ್ಖಾನೆಯಲ್ಲಿದೆ ಎಂದು ಹಟ್ಟಿಹೊಳಿ ಅವರು ತಿಳಿಸಿದರು.
ಈ ಬಾರಿ ಕಬ್ಬಿನ ದರವನ್ನು ಪ್ರತಿ ಮೆಟ್ರಿಕ್ ಟನ್ಗೆ 3,250 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಕಬ್ಬು ಕಟಾವು ಮತ್ತು ಸರಬರಾಜು ವೆಚ್ಚವನ್ನು ಕಳೆದ ಬಾರಿಯ 815 ರೂಪಾಯಿಯಿಂದ 828 ರೂಪಾಯಿಗೆ ಏರಿಸಲಾಗಿದೆ. ಉಪ ಉತ್ಪನ್ನಗಳಾದ ಕಾಕಂಬಿ, ಸ್ಪಿರಿಟ್ ಮತ್ತು ಆಲ್ಕೋಹಾಲ್ ಉತ್ಪಾದನೆಯಲ್ಲೂ ಗಣನೀಯ ಸುಧಾರಣೆ ಕಂಡುಬಂದಿದ್ದು, ಆಡಳಿತ ಮಂಡಳಿಯು ರೈತರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅದರಂತೆ ‘ಅ’ ವರ್ಗದ 16,903 ಸದಸ್ಯರಿಗೆ 25 ಕೆಜಿ ಸಕ್ಕರೆಯನ್ನು ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಲಾಗಿದೆ. ಕಬ್ಬು ಸರಬರಾಜು ಮಾಡಿದ ಸದಸ್ಯರಿಗೆ ಪ್ರತಿ ಟನ್ಗೆ 250 ಗ್ರಾಂನಂತೆ ರಿಯಾಯಿತಿ ದರದಲ್ಲಿ ಹಾಗೂ ಕಾರ್ಖಾನೆಯ ನೌಕರರಿಗೆ ತಲಾ 10 ಕೆಜಿ ಸಕ್ಕರೆಯನ್ನು ಉಚಿತವಾಗಿ ವಿತರಿಸಲಾಗುವುದು. ಕಾರ್ಖಾನೆಯ ತಾಂತ್ರಿಕ ಅಭಿವೃದ್ಧಿಗಾಗಿ 12 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲು ಉದ್ದೇಶಿಸಲಾಗಿದ್ದು, ನಿವೃತ್ತ ನೌಕರರ ಬಾಕಿ ಇರುವ 3 ಕೋಟಿ ರೂಪಾಯಿ ಗ್ರ್ಯಾಜುವೇಟಿ ಹಣವನ್ನು ಹಂಚುವ ಕುರಿತು ಮುಂದಿನ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಚನ್ನರಾಜ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (MSP) ತಕ್ಷಣವೇ ಹೆಚ್ಚಿಸಬೇಕೆಂದು ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರು ಆಗ್ರಹಿಸಿದರು.
ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ, ಉಪಾಧದ್ಯಕ್ಷರಾದ ಶಿವನಗೌಡ ಪಾಟೀಲ ಆಡಳಿತ ಮಂಡಳಿಯ ಸದಸ್ಯರಾದ ಶೆಂಕ್ರೆಪ್ಪ ಹೊಳಿ, ಸುರೇಶ ಹುಲಿಕಟ್ಟಿ, ರಾಮಾನಗೌಡ ಪಾಟೀಲ, ರಘು ಪಾಟೀಲ, ಭರಮಪ್ಪ ಶಿಗೀಹಳ್ಳಿ, ಬಾಳಪ್ಪ ಪುಜಾರ, ಕಾರ್ಖಾನೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ಫೋಟೋ ಕ್ಯಾಪ್ಷನ್: ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಅವರು ಕಾರ್ಖಾನೆಯ ಸಾಧನೆ ಮತ್ತು ರೈತರ ಹಿತರಕ್ಷಣೆಯ ಕುರಿತು ಮಾತನಾಡಿದರು.


