ಬಳ್ಳಾರಿ ಮಾ, 21.- ಇಂದಿನ ಜಗತ್ತಿನಲ್ಲಿ ಸಾಮ್ರಾಜ್ಯಶಾಹಿ ಧೋರಣೆ ಹಾಗೂ ವಸಾಹತುಶಾಹಿಗಳು ವ್ಯಾಪಾರ ಮತ್ತು ಸಂಪತ್ತಿನ ಲೂಟಿಗಾಗಿ ಯುದ್ಧಕ್ಕೆ ಕಾರಣವಾಗುತ್ತಿದ್ದಾರೆ. ಯುದ್ಧದ ಮೂಲಕ ಅಪಾರ ಜೀವ ಸಂಕುಲದ ನಾಶಕ್ಕೆ ನಾಂದಿಯಾಡುತಿದ್ದಾರೆ ಎಂದು ( ಸಿಪಿಡಿಆರ್ ಎಸ್) ಜನತಾಂತ್ರಿಕ ಹಕ್ಕುಗಳು ಮತ್ತು ಧರ್ಮಾತೀತ ರಕ್ಷಣಾ ಕೇಂದ್ರದ ರಾಜ್ಯ ಸಂಚಾಲಕ ಎನ್. ರವಿ ಅಭಿಪ್ರಾಯ ಪಟ್ಟರು.
ನಗರದ ಸರಳಾದೇವಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನತಾಂತ್ರಿಕ ಹಕ್ಕುಗಳು ಮತ್ತು ಧರ್ಮಾತೀತ ರಕ್ಷಣಾ ಕೇಂದ್ರ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ
‘ಯುದ್ಧ ಮತ್ತು ಶಾಂತಿ ‘ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಒಂದುವರೆ ದಶಕದಿಂದ ವಿಶ್ವದಲ್ಲೆಡೆ ಯುದ್ಧವು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಶ್ರೀಮಂತ ರಾಷ್ಟ್ರಗಳಲ್ಲಿರುವ ಅತೀ ಹೆಚ್ಚು ಯುದ್ಧೋಪಕರಣಗಳ ಸಂಗ್ರಹವು ಆಧಾರವಾಗಿದ್ದು, ಲಕ್ಷಾಂತರ ಮುಗ್ಧ ಮಕ್ಕಳು ಸೇರಿದಂತೆ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ. ಇದಕ್ಕೆ ಸಾಮ್ರಾಜ್ಯಶಾಹಿ ಧೋರಣೆ ಹಾಗೂ ಬಂಡವಾಳಶಾಹಿಗಳ ದುರಾಸೆಯೇ ಬಲವಾದ ಕಾರಣವೆಂದು ಬೇಸರ ವ್ಯಕ್ತಪಡಿಸಿದರು.
ಅಮೇರಿಕಾದ ಅಧ್ಯಕ್ಷ ಟ್ರಂಪ್ ಇತ್ತೀಚೆಗೆ ಬೌದ್ಧಿಕ ಸ್ಥಿಮಿತತೆ ಕಳೆದುಕೊಂಡಿದ್ದು ಇರಾನ್ ಯುದ್ಧಕ್ಕೆ ದಿನಕ್ಕೊಂದ್ದು ಕಾರಣ ಕೊಡುತ್ತಿರುವುದು ವಿಷಾದನೀಯ. ಹೀಗಾಗಿ ವಿಶ್ವದ ಯಾವುದೇ ದೇಶ ಟ್ರಂಪ್ ಗೆ ಬೆಂಬಲ ನೀಡುತ್ತಿಲ್ಲ. ಸ್ವ ಹಿತಾರಕ್ಷಣೆಗೆ ನಡೆಯುತ್ತಿರುವ ಯುದ್ಧದ ದುಷ್ಪರಿಣಾಮ ಅಪಾರವಾಗಿದ್ದು, ಜೀವವಿರೋಧಿ ನೀತಿ ಮಾನವ ವಿನಾಶಕ್ಕೆ ಮೂಲವಾಗುತ್ತಿದೆ. ಬಹಳ ಮುಖ್ಯವಾಗಿ ಅಮೇರಿಕಾದ ವ್ಯಾಪಾರ ಸಾಮ್ರಾಜ್ಯಶಾಹಿ ನೀತಿಯನ್ನು ಪ್ರತಿಯೊಂದು ದೇಶ ತೀವ್ರವಾಗಿ ವಿರೋಧಿಸಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಹೊನ್ನೂರಾಲಿ ಜನಸಾಮಾನ್ಯರಿಗೆ ಯುದ್ಧದ ದುಷ್ಪರಿಣಾಮಗಳ ಬಗೆಗೆ ಅರಿವಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಹೇರಿಕೆಯ ಬಿಸಿ ತಟ್ಟಿದಾಗ ಜನರು ಯುದ್ಧ ಬೇಡ ಎನ್ನುತ್ತಾರೆ. ಹೊಸ ತಲೆಮಾರಿಗೆ ಜಾಗೃತಿ ಮೂಡಿಸುವ ಕೆಲಸ ಜರೂರಿದೆ.ಮಾನವ ವಿರೋಧಿ ಸಾಮಾಜಿಕ ಜಾಲ ತಾಣಗಳ ತಪ್ಪು ಮಾಹಿತಿಗಳನ್ನು ನಂಬಿ ಯುದ್ದೋನ್ಮಾದ ಅನುಭವಿಸಿದ್ದು ತಪ್ಪು. ಹೀಗಾಗಿ ಯುದ್ಧ ಪೀಪಾಸೆಗಳಿಗೆ ರಾಜಾತಿಥ್ಯ ದೊರೆಯುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ವಕೀಲರಾದ ಸೋಮಶೇಖರ್ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಪ್ರಾಧ್ಯಾಪಕರಾದ ಡಾ. ಹುಚ್ಚೂಸಾಬ್, ಬಸವರಾಜ್, ಅತಿಥಿ ಉಪನ್ಯಾಸಕರಾದ ಡಾ.ದುರುಗಪ್ಪ, ಗೋವಿಂದಪ್ಪ , ಶ್ರೀನಿವಾಸ್ ಇದ್ದರು.


