ಕರ್ಚೇಡು ಗ್ರಾಮದಲ್ಲಿ ರಾಮಾಯಣ ಬಯಲಾಟ ಅದ್ದೂರಿ ಪ್ರದರ್ಶನ

MK HasiruKranti
ಕರ್ಚೇಡು ಗ್ರಾಮದಲ್ಲಿ ರಾಮಾಯಣ ಬಯಲಾಟ ಅದ್ದೂರಿ ಪ್ರದರ್ಶನ
WhatsApp Group Join Now
Telegram Group Join Now
ಬಳ್ಳಾರಿ, ಮಾ.16 : ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ಊರಿನ ಹೈಸ್ಕೂಲ್ ಮೈದಾನದಲ್ಲಿರುವ ರಾಮುಲಮ್ಮ ಗುಡಿ ಸಮೀಪ ಶುಕ್ರವಾರ ಸಂಜೆ ರಂಗಗೀತೆಗಳ ಕಾರ್ಯಕ್ರಮ ಹಾಗೂ ರಾಮಾಯಣ ಬಯಲಾಟ ಪ್ರದರ್ಶನ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ಚೇಡು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ಶಿವಶರಣ ಅಶ್ವತ್ಥಾಮ ತಾತನವರ ಆಶೀರ್ವಾದದೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದ ಪ್ರಾರ್ಥನಾ ಗೀತೆಯನ್ನು ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾರ್ಮೋನಿಯಂ ವಾದಕ ವೈ. ರಂಗಾರೆಡ್ಡಿ ಅವರು ಹಾಡಿದರು. ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುಜಾತಮ್ಮ, ರಂಗಭೂಮಿ ಕಲಾವಿದೆ ಎರ್ರೆಮ್ಮ ಹಾಗೂ ಬಿ. ಲಕ್ಷ್ಮೀನಾರಾಯಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಗರಾಜಗೌಡ ಕರ್ಚೇಡು ಅವರ ತಂಡದಿಂದ ರಾಮಾಯಣ ಬಯಲಾಟ ಪ್ರದರ್ಶನ ಭರ್ಜರಿಯಾಗಿ ನಡೆಯಿತು. ಬಯಲಾಟದ ವಿವಿಧ ಪಾತ್ರಗಳನ್ನು ಕಲಾವಿದರು ಅತ್ಯಂತ ಮನೋಜ್ಞವಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವೈ. ರಂಗಾರೆಡ್ಡಿ ಸೇರಿದಂತೆ ಗ್ರಾಮದ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಯಲಾಟ ಕಲಾವಿದರನ್ನು ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಬಯಲಾಟದಲ್ಲಿ ರಾವಣಾಸುರ ಪಾತ್ರವನ್ನು ರಾಜ ಕರ್ಚೇಡು, ಶ್ರೀರಾಮ ಪಾತ್ರವನ್ನು ನಾಗೇಶ್ ವಣೇನೂರು, ಲಕ್ಷ್ಮಣ ಪಾತ್ರವನ್ನು ಬಸವರಾಜ ಬೆಣಕಲ್ಲು, ಅಂಜಿನೇಯ್ಯ ಪಾತ್ರವನ್ನು ಮಲ್ಲಿಕಾರ್ಜುನ ಗೂಳ್ಯಂ, ಮಾರೀಚ ಪಾತ್ರವನ್ನು ಸಂಗಾಲ್ ಸೀನಪ್ಪ, ಸೀತಾದೇವಿ ಪಾತ್ರವನ್ನು ಕೋಟೆ ಅಂಜಿನಮ್ಮ (ಕೂಡ್ಲಿಗಿ) ಹಾಗೂ ಮಾಯಾಸ್ತ್ರೀ ಪಾತ್ರವನ್ನು ನಾಗಮ್ಮ ವೀರಾಪುರ ಅವರು ನಿರ್ವಹಿಸಿದರು.
ಹಾರ್ಮೋನಿಯಂ ವಾದಕರಾಗಿ ವೈ. ರಂಗಾರೆಡ್ಡಿ (ಕೆ. ವೀರಾಪುರ) ಹಾಗೂ ತಬಲಾ ವಾದಕರಾಗಿ ವೀರೇಶ್ ಬಳ್ಳಾರಿ ಸೇವೆ ಸಲ್ಲಿಸಿದರು. ಬಯಲಾಟ ಸಾಮಾನುಗಳನ್ನು ಶ್ರೀ ಬಸವೇಶ್ವರ ರಂಗಸಜ್ಜಿಕೆ, ಬೂದೂಗುಪ್ಪ ಒದಗಿಸಿದ್ದು, ಮೇಕಪ್ ಆರ್ಟಿಸ್ಟ್ ಆಗಿ ಗಂಗಾಧರ ಬೂದೂಗುಪ್ಪ ಕಾರ್ಯನಿರ್ವಹಿಸಿದರು. ಹಿಮ್ಮೇಳ ಮತ್ತು ಮುಮ್ಮೇಳ ವಾದಕರಾಗಿ ಬಾದಮಿ ರಾಜಪ್ಪ, ಪಿ. ಶಾಗಪ್ಪ (ಕರ್ಚೇಡು), ಗಾದಿಲಿಂಗಪ್ಪ ಹಂದ್ಯಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂ. ಮಲ್ಲಿಕಾರ್ಜುನಸ್ವಾಮಿ ಹಾಗೂ ಕೆ.ಕೆ. ಹಾಳ್ ಅವರು ಸ್ವಾಗತಿಸಿದರು. ಕೊನೆಯಲ್ಲಿ ಸುಜಾತಮ್ಮ ಬಯಲಾಟ ಟ್ರಸ್ಟ್ ಬಳ್ಳಾರಿ ಕಾರ್ಯದರ್ಶಿ ಬಿ. ಲಕ್ಷ್ಮೀನಾರಾಯಣ ಅವರು ವಂದನಾರ್ಪಣೆ ಸಲ್ಲಿಸಿದರು.
WhatsApp Group Join Now
Telegram Group Join Now
Share This Article