ಬಳ್ಳಾರಿ,ಮಾ.11: ಕೇಂದ್ರ ಬಿಜೆಪಿ ಸರ್ಕಾರ ರೈತ-ಕಾರ್ಮಿಕರ ವಿರೋಧಿ, ಜನವಿರೋಧಿಯಾದ ವಿದ್ಯುಚ್ಛಕ್ತಿ {ತಿದ್ದುಪಡಿ) ಮಸೂದೆ ೨೦೨೫ ಅನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುವುದರ ವಿರುದ್ಧ ಜಿಲ್ಲಾಧಿಕಾರಿ ಕಛೇರಿಯಲ್ಲಿ ಎಐಪಿಎಫ್, ಎಐಕೆಕೆಎಂಎಸ್, ಎಐಯುಟಿಯುಸಿ ಹಾಗೂ ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿ, ಮಸೂದೆಯ ಪ್ರತಿಕೃತಿಯನ್ನು ದಹಿಸಲಾಯಿತು.
ಈ ಸಂದರ್ಭದಲ್ಲಿ ಎಐಪಿಎಫ್ ಜಿಲ್ಲಾ ನಾಯಕ ಡಾ||ಪ್ರಮೋದ್ ಮಾತನಾಡುತ್ತಾ, “ಮಸೂದೆಯ ನಿಬಂಧನೆಗಳು ದೇಶಾದ್ಯಂತ ನೌಕರರು, ಕಾರ್ಮಿಕರು, ವಿದ್ಯುತ್ ಗ್ರಾಹಕರು, ರೈತರು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿವೆ. ಜನರ ತೆರಿಗೆ ಹಣದಿಂದ ನಿರ್ಮಿಸಲಾದ ಈ ಬೃಹತ್ ಉದ್ದಿಮೆಯನ್ನು,, ಮುಖ್ಯವಾಗಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪೆನಿಗಳಿಗೆ ನೀಡಲಾಗುತ್ತದೆ. ಖಾಯಂ ಉದ್ಯೋಗ ವಿಲ್ಲದೆ ಸಂಕಷ್ಟದಲ್ಲಿರುವ ಗುತ್ತಿಗೆ ಕಾರ್ಮಿಕರ ಬದುಕನ್ನು ಇನ್ನಷ್ಟು ಅಭದ್ರತೆಗೆ ತಳ್ಳಿದಂತಾಗುತ್ತದೆ. ಸೇವಾ ಪರಿಸ್ಥಿತಿಗಳ ಕಡಿತ, ಉದ್ಯೋಗ ಕಡಿತ ಇವು ತಲೆ ದೂರತ್ತವೆ. ಈ ಹಿನ್ನಲೆಯಲ್ಲಿ ದೇಶವ್ಯಾಪಿ ಎಲ್ಲಾ ವರ್ಗದ ಜನರು ಪ್ರಬಲ ಹೋರಾಟ ರೂಪಿಸುವ ಅಗತ್ಯ ಇದೆ” ಎಂದರು.
ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘದ ಜಿಲ್ಲಾ ಮುಖಂಡ ಆರ್.ಸೋಮಶೇಖರ್ಗೌಡ ಮಾತನಾಡುತ್ತಾ, “ಹಲವಾರು ವಲಯಗಳಲ್ಲಿನ ಅನುಭವವು, ಖಾಸಗೀಕರಣವು ಹೆಚ್ಚಿನ ಸುಂಕಗಳು, ಲಾಭ-ಚಾಲಿತ ಸೇವಾ ವಿತರಣೆ ಮತ್ತು ಗ್ರಾಮೀಣ ಮತ್ತು ಕಡಿಮೆ ಲಾಭದಾಯಕ ಪ್ರದೇಶಗಳ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ ಎಂದು ತೋರಿಸಿದೆ. ಇದರಿಂದಾಗಿ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುತ್ತದೆ” ಎಂದರು.
ಎಐಕೆಕೆಎAಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ, ರೈತರು ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಕೈಗೆಟುಕುವ ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿವೆ. ಖಾಸಗೀಕರಣವು ಸುಂಕಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವ ಸಬ್ಸಿಡಿಯನ್ನು ದುರ್ಬಲಗೊಳಿಸುತ್ತವೆ” ಎಂದರು.
ಈ ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್, ಉಪಾಧ್ಯಕ್ಷರಾದ ಎ. ಶಾಂತಾ, ಎಐಪಿಎಫ್ ನ ಕಿರಣ್ ಕುಮಾರ್, ಮುಖಂಡರಾದ ಹನುಮಪ್ಪ, ಶರ್ಮಾಸ್, ಸುರೇಶ್, ಚೇತನ್, ಮುರಳಿಕೃಷ್ಣ, ಮುಂತಾದವರು ಉಪಸ್ಥಿತರಿದ್ದರು. ವಿದ್ಯುತ್ ಗ್ರಾಹಕರ ಸಂಘದ ರಾಜಾ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು.


