ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

A B
By A B
ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ
WhatsApp Group Join Now
Telegram Group Join Now
ಬಳ್ಳಾರಿ 10.: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಇಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಫೆಡರೇಷನ್ ನ ಜಿಲ್ಲಾಧ್ಯಕ್ಷೆ ಎಸ್.ಅರ್ಕಾಣಿ ಅವರು ಈ ವೇಳೆ ಮಾತನಾಡಿ, ರಾಜ್ಯ ಸರ್ಕಾರ ಮಂಡಿಸಿರುವ ಇತ್ತೀಚಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಕೇವಲ ಸೀರೆ ವಿತರಿಸುವ ಮಾತಾಗಿದೆ. ಇದು ನಿರಾಶೆ ಉಂಟುಮಾಡಿದೆ ಎಂದು ಫೆಡರೇಷನ್ ಆರೋಪಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಅಂಗನವಾಡಿ, ಬಿಸಿ ಊಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷ ಕಳೆದರೂ ಆ ಭರವಸೆ ಈಡೇರಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದುವರೆಗೆ ಅನುಷ್ಠಾನಕ್ಕೆ ತರಲಾಗಲಿಲ್ಲ. ನಂತರದ ಬಜೆಟ್‌ನಲ್ಲಿ ಕೇವಲ ಸಾವಿರ ರೂಪಾಯಿ ಮಾತ್ರ ಹೆಚ್ಚಳ ಮಾಡಲಾಗಿದೆ. ಸರ್ಕಾರ ನೀಡಿದ ಭರವಸೆಯಂತೆ ಮಾಸಿಕ ರೂ. ೧೫,೦೦೦ ಗೌರವಧನ ನೀಡುವ ಘೋಷಣೆ ಇನ್ನೂ ಜಾರಿಯಾಗಿಲ್ಲ. ೨೦೧೧ ರಿಂದ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಲಾಗಿಲ್ಲ. ೨೦೨೦ರ ನಂತರ ನಿವೃತ್ತರಾದವರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತಿದೆ. ಇದರಿಂದ ಸಾವಿರಾರು ವಯೋವೃದ್ಧರಿಗೆ ನ್ಯಾಯ ಸಿಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಬಜೆಟ್ ಅಂಗೀಕಾರಗೊಳ್ಳುವ ಮೊದಲು ಸೀರೆ ನೀಡುವ ಪ್ರಸ್ತಾಪವನ್ನು ಕೈಬಿಟ್ಟು ಅದೇ ಅನುದಾನವನ್ನು ಗೌರವಧನ ಹೆಚ್ಚಳಕ್ಕೆ ಬಳಸುವಂತೆ ಫೆಡರೇಷನ್ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಮಾರ್ಚ್ ೭ರಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು `ಸೀರೆ ಬೇಡ, ಗೌರವಧನ ಹೆಚ್ಚಿಸಿ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿರುವುದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನ ಕಾನೂನು ಸಲಹೆಗಾರರಾದ ಎ.ಆರ್.ಎಂ.ಇಸ್ಮಾಯಿಲ್, ತಾಲೂಕು ಘಟಕದ ಅಧ್ಯಕ್ಷೆ ಇ.ಮಂಗಮ್ಮ, ಪದಾಧಿಕಾರಿಗಳಾದ ರ‍್ರೆಮ್ಮ, ಮೀನಾ, ಇಂದಿರಾ, ವೀರಮ್ಮ ಹಿರೇಮಠ ಮತ್ತಿತರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Share This Article