ಶ್ರೀಕಾಂತ ಶಾನವಾಡ ‘ಸಾವಿರದ ಬದುಕು’ ಕಾದಂಬರಿ ಬಿಡುಗಡೆ
ಮಾ.2 ಬೆಳಗಾವಿ: ಸಾಹಿತ್ಯ ಸಮಾಜವನ್ನು ಬದಲಾಯಿಸುವ ಶಕ್ತಿಹೊಂದಿದೆ. ನಮ್ಮೊಳಗಿನ ಅಜ್ಞಾನ ಮೂಢನಂಬಿಕೆಗಳನ್ನು ತೊಡೆದುಹಾಕಿ ನವಜೀವನಕ್ಕೆ ಕರೆನೀಡುತ್ತದೆ. ವೈಚಾರಿಕ ಪ್ರಜ್ಞೆಯನ್ನುಂಟುಮಾಡುತ್ತದೆ. ಅದನ್ನು ಆಸಕ್ತಿಯಿಂದ ಓದು ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ಹಿರಿಯ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಹೇಳಿದರು.
ಅವರು ನಗರದ ಕನ್ನಡ ಭವನದಲ್ಲಿ ಕನ್ನಡ ಭವನ ಹಾಗೂ ಚಿನ್ಮಯ ಪ್ರಕಾಶನ ಬೆಳಗಾವಿ ಸಹಯೋಗದಲ್ಲಿ ಪ್ರೊ. ಶ್ರೀಕಾಂತ ಶಾನವಾಡ ಅವರ ‘ಸಾವಿರದ ಬದುಕು’ ಚೊಚ್ಚಲ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಾನ್ ಹೆನ್ರಿ ನ್ಯೂಮನ್ ರಚಿಸಿದ ‘ಲಿಡ್ ಕಾಂಡ್ಲಿ ಲೈಟ್’ ಒಂದೇ ಪದ್ಯದಿಂದ ಅಮರ ಕವಿಯಾದರು. ಬಿ.ಎಂ.ಶ್ರೀಯವರು ಕನ್ನಡದಲ್ಲಿ ‘ಕರುಣಾಳ ಬಾ ಬೆಳಕೆ ಮುಸಗಿದಿ ಮಬ್ಬಿನಲಿ’ ಎಂದು ಅನುವಾದಿಸಿದ್ದು. ಇತಿಹಾಸ. ಅಂದರೆ ಅಮರವಾದ ಸಾಹಿತ್ಯ ಸಮಾಜಕ್ಕೆ ಯಾವತ್ತೂ ಬೆಳಕಾಗಿ ಉಳಿಯುತ್ತದೆ. ಸಮಾಜವನ್ನು ವೈಚಾರಿಕೆಯಡೆಗೆ ಕೊಂಡೊಯ್ಯುವ ಸಾಹಿತ್ಯ ರಚನೆ ಅಗತ್ಯವೆನಿಸಿದೆ. ಸಾಹಿತ್ಯದ ಕೃತಿಗಾತ್ರ ಎಷ್ಟು ದೊಡ್ಡದು ಎಂಬುದು ಮುಖ್ಯವಲ್ಲ ಅದರ ಸಂದೇಶ ಬಹುದೊಡ್ಡದು. ಅಂತಹ ವೈಚಾರಿಕೆ ಪ್ರಜ್ಞೆಯನ್ನು ನೀಡುವ ಪ್ರಸ್ತುತ ಕಾದಂಬರಿ ಸಮಾಜಕ್ಕೆ ಸಂಜೀವಿನಿಯಾಗಿ ಮೂಢನಂಬಿಕೆಗಳನ್ನು ತೊಡದುಹಾಕುವಲ್ಲಿ ಮಹತ್ವದ ಕಾರ್ಯಮಾಡಿದೆ. ಶಾನವಾಡರು ಕಥೆ, ಕಾವ್ಯ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದವರು. ಈಗ ಚೊಚ್ಚಿಲು ಕಾದಂಬರಿಯನ್ನು ನೀಡಿ ಕನ್ನಡ ಸಾಹಿತ್ಯ ವಲಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಸಮಾಜಕ್ಕೆ ಒಂದು ಗಟ್ಟಿಯಾದ ಧ್ವನಿ ಪ್ರತಿಧ್ವನಿಸಿದೆ. ಈ ಸಾಹಿತ್ಯ ಅಭಿಯಾನ ಅವರಿಂದ ಇನ್ನಷ್ಟು ಮುಂದುವರೆಯಲೆAದು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗಂದಿಗವಾಡದ ಮೃತ್ಯುಂಜಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಮುಂಡರಗಿ ತಾಲೂಕಾಧ್ಯಕ್ಷ ಪ್ರೊ. ಎಂ. ಜಿ. ಗಚ್ಚಣ್ಣವರ ಆಗಮಿಸಿದ್ದರು. ಸಾಹಿತಿ ಯ.ರು. ಪಾಟೀಲ ಕೃತಿ ಪರಿಚಯಿಸಿದರು. ಬೆನ್ಸ್ಮಿತ್ ಪ್ರಾಚಾರ್ಯ ಪ್ರೊ.ವಿಜಯ್ ಎಲಿಷ್, ಪ್ರೊ.ಕೆ. ಶಾಮಪ್ರಸಾದ ವೇದಿಕೆಯ ಮೇಲಿದ್ದರು. ಡಾ.ಮಹೇಶ ಗುರನಗೌಡರ ಆಶಯ ನುಡಿಗಳನ್ನಾಡಿದರು. ಪ್ರಕಾಶಕಿ ಅನುಪಮಾ ಶಾನವಾಡ ವಂದಿಸಿದರು. ಚಿನ್ಮಯ ಶಾನವಾಡ ಸ್ವಾಗತಿಸಿದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು. ಡಾ.ಸರಜೂ ಕಾಟ್ಕರ, ಶಿವನಗೌಡ ಪಾಟೀಲ, ಎಮ್.ವಾಯ್.ಮೆನಸಿನಕಾಯಿ, ರತ್ನಪ್ರಭಾ ಬೆಲ್ಲದ ಮೊದಲಾದವರು ಉಪಸ್ಥಿತರಿದ್ದರು.


