ಬಳ್ಳಾರಿ, ಫೆ.19: ರಾಜ್ಯ ಬಜೆಟ್ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ನಿಗಮವನ್ನು ಸ್ಥಾಪಿಸಿ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಈ ಹಿಂದೆ ಘೋಷಿಸಲಾದ 200 ಕೋಟಿ ರೂ.ಗಳನ್ನು ಈ ಬಜೆಟ್ ನಲ್ಲಿ ಮೀಸಲಿಡಬೇಕು ಎಂದು ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪುನರ್ವಸತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ವೀಣಾ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ಮಾತನಾಡಿದ ಅಧ್ಯಕ್ಷೆ ವೀಣಾ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸರ್ವೋತೋಮುಖ ಅಭಿವೃದ್ಧಿಗಾಗಿ 200 ಕೋಟಿ ರೂ. ಮೀಸಲಿಡುವುದಾಗಿ ಭರವಸೆ ನೀಡಿತ್ತು. ಈಗ ಸರ್ಕಾರ ತನ್ನ ಮಾತು ಉಳಿಸಿಕೊಳ್ಳುವ ಹೊಣೆಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಆಗ್ರಹಿಸಿದ ಅವರು ಪ್ರಸ್ತುತ 2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಕಡ್ಡಾಯವಾಗಿ ಈ ಅನುದಾನವನ್ನು ಮೀಸಲಿಡಬೇಕು. ಇದು ಸರ್ಕಾರ ನಮಗೆ ನೀಡುವ ಭಿಕ್ಷೆ ಅಲ್ಲ ಉಪಕಾರವಲ್ಲ, ಇದು ನಾವು ಪಡೆದುಕೊಳ್ಳಬೇಕಾದ ನಮ್ಮ ಸಂವಿಧಾನಾತ್ಮಕ ಹಕ್ಕು ಎಂದು ಅವರು ಪ್ರತಿಪಾದಿಸಿದರು.
ಅಷ್ಟೇ ಅಲ್ಲದೆ ವಸತಿಹೀನ ನಿರಾಶ್ರಿತರಿಗೆ
ವಸತಿ ಹಾಸ್ಟೆಲ್ ಮತ್ತು ಶಾರ್ಟ್ ಸ್ಟೇ ಹೋಮ್ಗಳನ್ನು ಆರಂಭಿಸಬೇಕು.
ಪ್ರತಿ ವರ್ಷ ಕನಿಷ್ಠ 500 ಮನೆಗಳನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ನಿವೇಶನ ಜೊತೆಗೆ ಮನೆಗಳನ್ನು ಕಟ್ಟಿಸಿಕೊಡಬೇಕು,
ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರಿಗೂ 2 ಎಕರೆ ಕೃಷಿಯೋಗ್ಯ ಭೂಮಿ ನೀಡಬೇಕು. ವ್ಯಾಪಾರ ವಹಿವಾಟಿನಲ್ಲಿ ಆಸಕ್ತಿ ಇರುವವರಿಗೆ ಸಹಾಯಧನ ಮತ್ತು ಅತಿ ಕಡಿಮೆ
ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು.
ಮೈತ್ರಿ ಯೋಜನೆಯಲ್ಲಿ ಸರ್ಕಾರ ನೀಡುತ್ತಿರುವ ಪಿಂಚಣಿಯನ್ನು ತಿಂಗಳಿಗೆ 2000 ರೂ.ಗೆ ಹೆಚ್ಚಿಸಬೇಕು,
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾಡು ಹೊಂದಿದವರಿಗೆ ಎಸ್ ಆರ್ ಎಸ್ ಚಿಕಿತ್ಸೆ ಪಡೆದುಕೊಳ್ಳಲು ಉಚಿತ ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆ ಜಾರಿಗೊಳಿಸಬೇಕು.
ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ ಆರು ತಿಂಗಳು ಪ್ರತಿ ತಿಂಗಳು 5000 ರೂ. ನೆರವು ನೀಡಬೇಕು, ಪ್ರತಿಯೊಂದು ಜಿಲ್ಲೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಕನಿಷ್ಠ ಒಂದು ವಿಶೇಷ ಆರೋಗ್ಯ ಕೇಂದ್ರ ತೆರೆಯಬೇಕು.
ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಬದುಕು ಗೌರವಯುತ ಜೀವನ, ಭದ್ರತೆ, ಉದ್ಯೋಗ ಮತ್ತು ಆರೋಗ್ಯ ಇವುಗಳು ಸಂವಿಧಾನಾತ್ಮಕ ಹಕ್ಕುಗಳಾಗಿವೆ. ಸರ್ಕಾರ ತನ್ನ ಚುನಾವಣಾ ವಾಗ್ದಾನವನ್ನು ಈ ಬಜೆಟ್ನಲ್ಲಿ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ಅನುಷ್ಠಾನಗೊಳಿಸಬೇಕು, ಒಂದು ವೇಳೆ ಸರ್ಕಾರ ಹಿಂದೆ ನೀಡಿರುವ ಭರವಸೆಯನ್ನು ಈಡೇರಿಸದಿದ್ದಲ್ಲಿ ನಮ್ಮ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿವಾನಿ, ಪರ್ವೀನ್, ಮಾಳಮ್ಮ, ಯುಗಂಧರ್, ವೆಂಕಟೇಶ್, ನಾಗರಾಜ್, ಜನಾರ್ಧನ್, ಯೂಸುಫ್ ಹಾಗೂ ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


