ಬಳ್ಳಾರಿ ಫೆ, 19:: ಅಭಿವೃದ್ಧಿಯ ನೆಪದಲ್ಲಿ ಕಾರ್ಪೊರೇಟ್ ಜಗತ್ತು ಸೃಷ್ಟಿಸುತ್ತಿರುವ ಆತಂಕ, ತಲ್ಲಣಗಳೇ ನನ್ನ ಕತೆಗಳ ಭಿತ್ತಿಯನ್ನು ರೂಪಿಸಿವೆ ಎಂದು ಕತೆಗಾರ ಮಹಾಂತೇಶ ನವಲಕಲ್ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಸರಳಾದೇವಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಿದ್ದ ‘ ಪಠ್ಯ ಲೇಖಕರೊಂದಿಗೆ ಸಂವಾದ ‘ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ಕಂಪನಿಗಳು ಕಳಪೆ ಬೀಜ, ಗೊಬ್ಬರವನ್ನು ಗ್ರಾಮೀಣ ರೈತರಿಗೆ ಕೊಡುವುದರ ಮೂಲಕ ದುಡಿವ ಸಮುದಾಯವನ್ನು ವಂಚಿಸುತ್ತಿವೆ. ಹೀಗಾಗಿ ರೈತ ಕಷ್ಟದಲ್ಲಿ ಇದ್ದಾನೆ. ಸಾವಿಗೂ ಈಡಾಗುತ್ತಿದ್ದಾನೆ. ಬೀಜದ ಏಕಸ್ವಾಮ್ಯತೆ ಎಗ್ಗಿಲ್ಲದೆ ನಡೆಯುತ್ತಿದೆ. ವಿದೇಶದಲ್ಲಿ ನಿಷೇಧಕ್ಕೆ ಒಳಪಟ್ಟ ವಸ್ತುಗಳು ನಮ್ಮ ದೇಶದಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿರುವುದು ದುರಂತದ ಸಂಗತಿ. ಇಂತಹ ಹಲವು ವೈಪರಿತ್ಯಗಳನ್ನು ನನ್ನ ಕಥೆಗಳು ಸೂಕ್ಷ್ಮವಾಗಿ ತೆರೆದಿಟ್ಟಿವೆಂದರು. .
ನಮ್ಮ ಯೋಚನೆಗಳು ಇಂದು ವಿಲೋಮ ಸ್ಥಿತಿಗೆ ತಲುಪದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆ.ನಿತ್ಯ ನಡೆವ ಹುನ್ನಾರಗಳ ಬಗೆಗೆ ಸೂಕ್ಷ್ಮ ತಿಳುವಳಿಕೆ, ಪ್ರತಿರೋಧ ಅಗತ್ಯ ಎಂದು ಒತ್ತಿ ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ, ನವಲಕಲ್ ನಮ್ಮ ನಾಡು ಕಂಡ ಅಪೂರ್ವ ಕತೆಗಾರರು. ಅವರ ಕತೆಗಳು ವ್ಯವಹಾರ ಪ್ರಧಾನ ಜಗತ್ತನ್ನು ಕಲಾತ್ಮಕವಾಗಿ ವ್ಯಂಗ್ಯ, ವಿಡಂಬನೆಯಿಂದ ಅನಾವರಣಗೊಳಿಸಿವೆ. ಗ್ರಾಮೀಣ ಬದುಕನ್ನು ಶೋಧಿಸುವಂತಿವೆ , ಲೇಖಕರ ಪ್ರಧಾನ ಕಾಳಜಿ ಮನುಷ್ಯ ಸಂಬಂಧಗಳನ್ನು ಶೋಧಿಸುವುದರ ಕಡೆ ತುಡಿದಿದೆಂದರು.
ಕತೆಗಾರ ವೀರೇಂದ್ರ ರಾವಿಹಾಳ ಮಾತನಾಡಿ, ವಿದ್ಯಾರ್ಥಿಗಳು ನವಲಕಲ್ ರ ಹೊಸ ಅನುಭವದ ಕಥೆಗಳನ್ನು ಓದುತ್ತಲೇ ಅವು ಧ್ವನಿಸುವ ಆಶಯ, ಕಾಳಜಿಗೆ ದನಿಯಾಗಬೇಕು. ಇತಿಹಾಸವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ಓದಿನ ಅಭಿರುಚಿಯೊಂದಿಗೆ ಸಾಂಸ್ಕೃತಿಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರಾಧ್ಯಾಪಕ ಟೆಂಗುರಿ ದೊಡ್ಡ ಬಸವರಾಜ ಇದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.


