ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಸೆಳೆದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಹಾಗೂ ಹೊಂದಿಸಿ ಬರೆಯಿರಿ, ತೀರ್ಥರೂಪ ತಂದೆಯವರಿಗೆ ಅಂತಹ ಉತ್ತಮ ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ‘ತಮ್ಮ ಸುಖಾಗಮನ ಬಯಸುವ’.
ವೈಷ್ಣವಿ ಫಿಲಂಸ್ ಮೂಲಕ ವಿಜಯ್ ಲೋಹಿತ್ ಅವರು ನಿರ್ಮಿಸುತ್ತಿರುವ, ಸತೀಶ್ ಎಚ್ ಗೌಡ ಅವರ ಸಹ ನಿರ್ಮಾಣವಿರುವ ಹಾಗೂ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ ‘ತಮ್ಮ ಸುಖಾಗಮನ ಬಯಸುವ’ ಚಿತ್ರದ ಮುಹೂರ್ತ ಸಮಾರಂಭ ಮಾಹಾ ಶಿವರಾತ್ರಿಯ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಿಲ್ಪ ಗಣೇಶ್ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

“ಇಂದು ನನ್ನ ಗೋಲ್ಡನ್ ದಿನ” ಎಂದು ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ “2006 ರಲ್ಲಿ ಮುಂಗಾರು ಮಳೆ ತೆರೆ ಕಂಡಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಇಂದು ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯಾಗಿದೆ. ಇದು ಗಣೇಶ್ ಅವರ ಇಪ್ಪತ್ತು ವರ್ಷಗಳ ಜರ್ನಿಯನ್ನು ಸಂಭ್ರಮಿಸುವ ಸಮಯ. ಇದು ಗಣೇಶ್ ಅವರಿಗಾಗಿಯೇ ಬರೆದಿರುವ ಕಥೆ. ಈ ಕಥೆಗೆ ಅವರೇ ಸೂಕ್ತ ನಾಯಕ. ಇದೊಂದು ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಹಾಗೂ ಎಮೋಷನಲ್ ಡ್ರಾಮ. ನನ್ನ ಹಿಂದಿನ ಚಿತ್ರಗಳ ಹಾಗೆ ಈ ಶೀರ್ಷಿಕೆ ಕೂಡ ಜನರಿಗೆ ಆಪ್ತವಾಗುತ್ತದೆ ಜೊತೆಗೆ ಕಥೆಗು ಹಾಗೂ ಪಾತ್ರಗಳಿಗೂ ಪೂರಕವಾಗಿದೆ” ಎಂದರು.
“ಮುಂಗಾರು ಮಳೆ’ 2006 ರಲ್ಲಿ ಬಿಡುಗಡೆಯಾಗಿದ್ದು ಇಪ್ಪತ್ತು ವರ್ಷಗಳು ಹೇಗೆ ಕಳೆಯಿತು ಗೊತ್ತಾಗಲಿಲ್ಲ. ದೇವರು ನನಗೆ ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ಬರಹಗಾರರು ಹಾಗೂ ನಿಮ್ಮೆಲ್ಲರ ಪ್ರೀತಿ ಕೊಟ್ಟಿದ್ದಾನೆ. ಇದು ಹೀಗೆ ಮುಂದುವರೆಯಲಿ. ನಿರ್ದೇಶಕ ಜಗನ್ನಾಥ ಹೇಳಿದ ಕಥೆ ಕೇಳುವಾಗಲೇ ಸಂತೋಷದಲ್ಲಿ ಅಳು ಬಂತು. ಅಂತಹ ಅಪರೂಪದ ಕಥೆ ಇದು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾದರೂ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಶೀರ್ಷಿಕೆಗಳು ಬಹಳ ಚೆನ್ನಾಗಿತ್ತು. ನಮ್ಮ ಚಿತ್ರಕ್ಕೂ ಇಂತಹ ಶೇರ್ಷಿಕೆಯನ್ನೇ ಆಯ್ಕೆ ಮಾಡಿ ಎಂದು ಹೇಳಿದ್ದೆ. ‘ತಮ್ಮ ಸುಖಾಗಮನ ಬಯಸುವ’ ಎಂದು ಎಲ್ಲರಿಗೂ ಪ್ರಿಯವಾಗುವ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಅರ್ಜುನ್ ಜನ್ಯ ಹಾಗೂ ನನ್ನ ಕಾಂಬಿನೇಶನ್ ನಲ್ಲಿ ಸಾಕಷ್ಟು ಜನಪ್ರಿಯ ಹಾಡುಗಳು ಬಂದಿದೆ. ಈ ಚಿತ್ರದಲ್ಲೂ ಸುಮಧುರ ಹಾಡುಗಳಿರಲ್ಲಿದೆ” ಎಂದು ನಾಯಕ ಗಣೇಶ್ ತಿಳಿಸಿದರು.
“ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಚಿತ್ರಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ” ಎಂದರು ನಿರ್ಮಾಪಕ ವಿಜಯ್ ಲೋಹಿತ್.


