ಕಂಪ್ಲಿ ಉತ್ಸವ: ಸಂಭ್ರಮ, ಸಾಂಸ್ಕೃತಿಕ ಇತಿಹಾಸ ಮರುಕಳಿಸಿದ ವೈಭವ ಮೆರವಣಿಗೆ

Sandeep Malannavar
ಕಂಪ್ಲಿ ಉತ್ಸವ: ಸಂಭ್ರಮ, ಸಾಂಸ್ಕೃತಿಕ ಇತಿಹಾಸ ಮರುಕಳಿಸಿದ ವೈಭವ ಮೆರವಣಿಗೆ
WhatsApp Group Join Now
Telegram Group Join Now

ಬಳ್ಳಾರಿ,ಫೆ.12 – ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಕಂಪ್ಲಿ ಉತ್ಸವದ ಮೊದಲ ದಿನ ಬುಧವಾರ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು.
ಕಂಪ್ಲಿ ಉತ್ಸವದ ಅಂಗವಾಗಿ ಕಂಪ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಳಗೊಂಡ ಸಂಭ್ರಮದ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕಲಾ ವಾದ್ಯಗಳ ವೈಭವದ ಮೆರವಣಿಗೆಯು ಪಟ್ಟಣದ ಸಾಂಸ್ಕೃತಿಕ ಕಲಾ ವೈಭವವನ್ನು ಮರುಕಳಿಸಿತು.


ಕಂಪ್ಲಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಕಲಾ ತಂಡಗಳ ಮೆರವಣಿಗೆಗೆ ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಪಟ್ಟಣದ ಕೋಟೆ ಪ್ರದೇಶದಲ್ಲಿ ಕಂಪಿಲರಾಯ, ಗಂಡುಗಲಿ ಕುಮಾರರಾಮ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.
*ಅದ್ಧೂರಿಯಾಗಿ ನಡೆದ ಮೆರವಣಿಗೆ:*
ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಮೆರವಣಿಗೆಯು ಪಟ್ಟಣದ ಕೋಟೆ ಪ್ರದೇಶದಿಂದ ಆರಂಭವಾಗಿ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ  ಮಾರ್ಕೆಟ್ ಮಾರ್ಗವಾಗಿ ಮಸೀದಿ ಮೂಲಕ ಅಂಬೇಡ್ಕರ್ ವೃತ್ತದಿಂದ ಸೋಮೇಶ್ವರ ದೇವಸ್ಥಾನದವರೆಗೆ ಸಾಗಿತು.


*ಗಮನ ಸೆಳೆದ ವಿವಿಧ ಕಲಾತಂಡಗಳು:*
ಮೆರವಣಿಗೆಯಲ್ಲಿ ಕಳಸ-ಅರ್ಧ ಕುಂಭ ಹೊತ್ತ ಮಹಿಳೆಯರು, ಸಾಂಸ್ಕೃತಿಕ ಕಲಾತಂಡಗಳಾದ ತಾಷೆ ರಂಡೋಲ್, ಡೊಳ್ಳು ಕುಣಿತ, ಹಗಲುವೇಷ, ನಂದಿಧ್ವಜ, ಮರಗಾಲು ಕುಣಿತ, ಕಹಳೆ ವಾದನ, ವೀರಗಾಸೆ ಕುಣಿತ, ಹಕ್ಕಿಪಿಕ್ಕಿ, ಕಂಸಾಳೆ, ವೀರಗಾಸೆ, ರಾಮಾಯಣ ವೇಷಧಾರಿತ ಪಾತ್ರಧಾರಿಗಳು, ಜನಪದ ಮಹಿಳಾ ನೃತ್ಯ ತಂಡದಿಂದ ಜಾನಪದ ನೃತ್ಯ, ಕುದುರೆ ಕುಣಿತ, ಗೊರವರ ಕುಣಿತ, ಹಲಗೆ ವಾದನ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವವದ ಮೆರಗನ್ನು ಇನ್ನಷ್ಟು ಹೆಚ್ಚಿಸಿದವು.
ಈ ಸಂದರ್ಭದಲ್ಲಿ ಕಂಪ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸರಾವ್, ತಹಶೀಲ್ದಾರ ಜೂಗಲ ಮಂಜುನಾಯಕ, ತೋರಣಗಲ್ಲು ಡಿಎಸ್ಪಿ ಪ್ರಸಾದ್ ಗೋಖಲೆ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು

WhatsApp Group Join Now
Telegram Group Join Now
Share This Article