ಶಿರಸಿ,ಏಪ್ರಿಲ್ 11: ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಹಾಗೂ ಬೆಂಬಲಿಗರು ತಾಲ್ಲೂಕಿನ ಬನವಾಸಿಯಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್ ಕೈ ಹಿಡಿದರು.
ಬನವಾಸಿಯ ಟಿಎಂಎಸ್ ಎದುರಿನ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಿಜೆಪಿಯವರು ನಮ್ಮ ಬೆಂಬಲಿಗರು, ಕಾರ್ಯಕರ್ತರನ್ನ ನಡೆಸಿಕೊಂಡ ರೀತಿಗೆ ಬೇಸರವಾಗಿದೆ. ಇದೇ ಬೇಸರದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಬನವಾಸಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ವಿವೇಕ್ ಹೆಬ್ಬಾರ್ ಹೇಳಿದ್ದಾರೆ.
ಅಲ್ಲದೇ, ನಾವು ಮೂಲತಃ ಕಾಂಗ್ರೆಸ್ ಕುಟುಂಬದವರು, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಜೀವನ ಸಾಗಿಸುತ್ತಿದ್ದವರಾದ್ದರಿಂದ ನಮ್ಮ ಮನೆಗೆ ವಾಪಸ್ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನ ಸದೃಢಗೊಳಿಸುತ್ತೇವೆ. ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ರನ್ನ ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ನೂತನವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ವಿವೇಕ್ ಹೆಬ್ಬಾರ್ ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬಳಿಕ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ವಿವೇಕ್ ಹೆಬ್ಬಾರ್, ವಿಧಾನಸಭಾ ಚುನಾವಣೆಯ ಬಳಿಕ ನಾವು ಅಂದರೆ ಕಳೆದ 2-3 ತಿಂಗಳಿನಿಂದ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ಆಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಪಕ್ಷದಲ್ಲಿರುವ ಕೆಲ ನಾಯಕರು ನಮ್ಮ ತಂದೆಯವರ ವಿರುದ್ಧ ಹೇಗೆ ಕೆಲಸ ಮಾಡಿದರು. ನಮ್ಮನ್ನು ಸೋಲಿಸಲು ಪ್ರಯತ್ನ ಪಟ್ಟ ವ್ಯಕ್ತಿಗಳಿಗೆ ಪಕ್ಷ ಉನ್ನತ, ಜವಾಬ್ದಾರಿಯನ್ನು ಕೊಟ್ಟಿತ್ತು. ಇದರಿಂದ ನಮ್ಮ ಕಾರ್ಯಕರ್ತರಿಗೆ ಬೇಸರ ಆಗಿತ್ತು. ಆದ್ದರಿಂದ ಅನಿವಾರ್ಯವಾಗಿ ಕಾರ್ಯಕರ್ತರ ಒತ್ತಾಯದ ಮೇರೆಗೆ ನಮ್ಮ ಮನೆಗೆ ಬರುವ ನಿರ್ಧಾರ ಮಾಡಿ ಬಂದಿದ್ದೇವೆ ಎಂದು ಹೇಳಿದರು.