ಉರ್ದು ಶಾಲೆ ಬಿಸಿಯೂಟ ಅಡುಗೆ ಕೋಣೆ ಕಾಮಗಾರಿ ಪ್ರಾರಂಭಕ್ಕೆ ಆಗ್ರಹ

Sandeep Malannavar
ಉರ್ದು ಶಾಲೆ ಬಿಸಿಯೂಟ ಅಡುಗೆ ಕೋಣೆ ಕಾಮಗಾರಿ ಪ್ರಾರಂಭಕ್ಕೆ ಆಗ್ರಹ
WhatsApp Group Join Now
Telegram Group Join Now

ಪುರಸಭೆ ಎದುರು ಎಸ್ಡಿಎಂಸಿಯವರಿಂದ ಧರಣಿ
ಮುದ್ದೇಬಿಹಾಳ: ಪಟ್ಟಣದ ಮಹೆಬೂಬನಗರದಲ್ಲಿರುವ ಸರ್ಕಾರಿ ಉರ್ದು ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50 ಲಕ್ಷ ಅನುದಾನದ ಬಿಸಿಯೂಟ ಕೋಣೆ ಕಾಮಗಾರಿಗೆ ಇ-ಟೆಂಡರ್ ಪಾಸಾಗಿದ್ದರೂ ಇದುವರೆಗೂ ಕಾಮಗಾರಿ ಆರಂಭಿಸದಿರುವುದನ್ನು ವಿರೋಧಿಸಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು ಹಾಗೂ ಪಾಲಕರು ಪುರಸಭೆ ಕಚೇರಿ ಎದುರು ಶುಕ್ರವಾರ ದಿಢಿರ್ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭ ಮುಖ್ಯಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರ ಪ್ರದರ್ಶಿಸಿದ ಧರಣಿ ನಿರತರು, ಪುರಸಭೆಗೆ 16-09-2025 ರಂದು ಕಾಮಗಾರಿಯ ಪ್ರಾರಂಭಿಸುವ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪುರಸಭೆಯಿಂದ ಸ್ಪಂಧನೆ ದೊರಕಿಲ್ಲ. ಕಾಮಗಾರಿಯೂ ಆರಂಭವಾಗಿಲ್ಲ. ಕೆಲಸ ಪ್ರಾರಂಭವಾಗದಿದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದರೂ ಪುರಸಭೆಯವರು ಗಂಭೀರವಾಗಿ ಪರಿಗಣಿಸಿಲ್ಲ. ಅರ್ಜಿಗೆ ಉತ್ತರವನ್ನೂ ಕೊಡುವ ಸೌಜನ್ಯ ತೋರಿಸಿಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿ ಈಗಲಾದರೂ ಪುರಸಭೆಯವರು ಎಚ್ಚೆತ್ತುಕೊಂಡು ಕಾಮಗಾರಿ ಪ್ರಾರಂಭಿಸದಿದ್ದರೆ ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ, ಈಗಾಗಲೇ ಕಾಮಗಾರಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ. 2022-23ನೇ ಸಾಲಿನ ಎಸ್.ಎಫ್.ಸಿ ವಿಶೇಷ ಯೋಜನೆಯಡಿ ರೂ 50 ಲಕ್ಷ ಅನುದಾನದಲ್ಲಿ ಶಾಲೆ ಅಭಿವೃದ್ಧಿ ಪಡಿಸುವ ಕಾಮಗಾರಿಯ ಟೆಂಡರದಲ್ಲಿ ತಾಂತ್ರಿಕವಾಗಿ ಅರ್ಹರಾದ 2 ಜನ ಗುತ್ತಿಗೆದಾರರಾದ ಗೊಲಯ್ಯ ಹಿರೇಮಠ, ಶ್ರೀಶೈಲ ವಿಭೂತಿ ಅವರ ತಾಂತ್ರಿಕ ಬಿಡ್‌ಗೆ ಅನುಮೋದನೆ ನೀಡಿ ಆರ್ಥಿಕ ಬಿಡ್ ತೆರೆಯಲು ಆದೇಶಿಸಿದೆ ಎಂದು ತಿಳಿಸಿ ಇದಕ್ಕೆ ಸಂಬಂಧಿಸಿದ ಪತ್ರವನ್ನು ಧರಣಿ ನಿರತರಿಗೆ ನೀಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಮೊಹಮ್ಮದ್ ರಫೀಕ್ ನಾಗರಾಳ, ರಿಯಾಜ್ ದೇಸಾಯಿ, ಶಬ್ಬೀರ್ ಸಾತಿಹಾಳ್, ರಜಾಕ್ ಇಲಕಲ್, ಸುಲೇಮಾನ್ ನಾಯ್ಕೋಡಿ, ಅಸ್ಲಾಂ ಕಿತ್ತೂರ್, ಯಾಸಿನ್ ಅತ್ತಾರ್ ಇನ್ನಿತರರು ಇದ್ದರು.
ಬುಧವಾರ ಮಕ್ಕಳ ಸಮೇತ ಪ್ರತಿಭಟನೆ ಎಚ್ಚರಿಕೆ: ಎಸ್ಡಿಎಂಸಿ ಅಧ್ಯಕ್ಷ ಮಹ್ಮದರಫೀಕ ನಾಗರಾಳ ಮಾತನಾಡಿ, 2022-23ರಲ್ಲಿ ಹಿಂದಿನ ಶಾಸಕರು (ಎ.ಎಸ್.ಪಾಟೀಲ ನಡಹಳ್ಳಿ) ಈ ಅನುದಾನ ಕೊಟ್ಟಿದ್ದರು. ಮನವಿ ಮೇಲೆ ಮನವಿ ಕೊಟ್ಟರೂ ಕಾಮಗಾರಿ ಪ್ರಾರಂಭಿಸಿಲ್ಲ. ಭರವಸೆಯಲ್ಲೇ ದಿನದೂಡುತ್ತಿದ್ದಾರೆ. ಬುಧವಾರ ಮಕ್ಕಳ ಸಮೇತ ಪುರಸಭೆಗೆ ಬಂದು ಧರಣಿ ಕೂಡುತ್ತೇವೆ. ಈಗಿನ ಶಾಸಕರಿಗೆ (ಸಿ.ಎಸ್.ನಾಡಗೌಡ) ನಾವು ಸಾಲಿಡ್  ಓಟ್ ಹಾಕಿದ್ದೇವೆ. ಒನ್ ವೇ ಮಾಡಿ ತೋರಿಸಿದ್ದೇವೆ. ಬಿಸಿಯೂಟದ ಕೊಣೆ ಇಲ್ಲದೆ ಮಕ್ಕಳಿಗೆ ಸಾಕಷ್ಟು ಸಮಸ್ಯೆ ಆಗತೊಡಗಿದೆ. ಕೆಲಸ ಪ್ರಾರಂಭಿಸವವರೆಗಾದರೂ ತಗಡಿನ ಶೆಡ್ ಹೊಡೆದು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಎಚ್ಚರಿಸಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯೆ: ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ 50 ಲಕ್ಷ ಅನುದಾನದ ಬಿಸಿಯೂಟ ಅಡುಗೆ ಕೋಣೆ ನಿರ್ಮಾಣ ಕಾಮಗಾರಿಗೆ
ತಾಂತ್ರಿಕ ಬಿಡ್ ಓಪನ್ ಆಗಿತ್ತು. ಇದೀಗ ಫೈನಾನ್ಸಿಯಲ್ ಬಿಡ್ ಕೂಡ ಓಪನ್ ಆಗಿದೆ. 2-3 ದಿನದಲ್ಲಿ ಭೂಮಿ ಪೂಜೆ ಮಾಡಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಧರಣಿ ನಿರತರಿಗೆ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರು.
ಫೋಟೊ: ಮುದ್ದೇಬಿಹಾಳ: ಧರಣಿ ನಿರತರು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಚರ್ಚಿಸಿದರು

WhatsApp Group Join Now
Telegram Group Join Now
Share This Article