ಸಮಾಜಮುಖಿ ಚಿಂತನೆಗಳ ಮೂಲಕ ಮನ ಪರಿವರ್ತನೆಯಾಗುವ ಸಾಹಿತ್ಯ ಸೃಜನೆಯಾಗಬೇಕು : ಡಿ ಎ ಬಿರಾದಾರ

Sandeep Malannavar
ಸಮಾಜಮುಖಿ ಚಿಂತನೆಗಳ ಮೂಲಕ ಮನ ಪರಿವರ್ತನೆಯಾಗುವ ಸಾಹಿತ್ಯ ಸೃಜನೆಯಾಗಬೇಕು : ಡಿ ಎ ಬಿರಾದಾರ
WhatsApp Group Join Now
Telegram Group Join Now

ನಿತ್ಯೋತ್ಸವ ಕವಿ ಪ್ರೊ. ಕೆ ಎಸ್ ನಿಸ್ಸಾರ್‌ಅಹಮ್ಮದ ಕನ್ನಡಿಗರ ಹೃದಯ ಸಾಮ್ರಾಟದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕನ್ನಡತನ ಬೆಳಗಿದ ಹೆಮ್ಮೆಯ ನಾಡ ದಿಗ್ಗಜರಿಗೆ ನುಡಿನಮನ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕಲಬುರಗಿ ವಿಭಾಗದ ಕೆಕೆಆರ್‌ಟಿಸಿ ಡಿ.ಸಿ ಡಿ ಎ ಬಿರಾದಾರ ಹೇಳಿದರು.
ನಗರದ ಹೊಟೇಲ್ ಮಧುವನದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ನಿತ್ಯೋತ್ಸವ ಕವಿಗೆ ನುಡಿನಮನ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿಗಾಗಿ ಸದಾ ಸ್ಮರಿಸುತ್ತಲೇ ಇರಬೇಕು. ಕನ್ನಡ ಸೇವೆಗೈದ ಮಹನೀಯರನ್ನು ಸ್ಮರಿಸುವ ಕಾರ್ಯವಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ರಾಜ್ಯ ವಕ್ತಾರರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ಸಾಹಿತ್ಯ ಹೃದಯಕ್ಕೆ ಹಿತ ನೀಡುವಂತಿರಬೇಕು. ಯಾವುದೇ ಒಬ್ಬ ವ್ಯಕ್ತಿಗೆ ತೆಜೋವಧೆ ಮಾಡುವ ಸಾಹಿತ್ಯ ಸಲ್ಲದು. ಕೇವಲ ಇನ್ನೊಬ್ಬರ ಒಲೈಕೆಗಾಗಿ ಸಾಹಿತ್ಯ ರಚನೆಯಾದರೆ ಸಾಲದು. ಸಮಾಜಮುಖಿ ಚಿಂತನೆಗಳ ಮೂಲಕ ಮನ ಪರಿವರ್ತನೆಯಾಗುವ ಸಾಹಿತ್ಯ ಸೃಜನೆಯಾಗಬೇಕು. ಇಂತಹ ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅಮ್ಮ ಫೌಂಡೇಶನ್ ಉತ್ತಮ ಕಾರ್ಯ ಮಾಡಿದೆ ಎಂದರು.


ಸಮಾರಂಭದಲ್ಲಿ ಉಪನ್ಯಾಸ ನೀಡಿದ ವಾಗ್ಮೀ ಅಶೋಕ ಹಂಚಲಿ ಹಾಗೂ ಸಾಹಿತಿ ಡಾ. ಸುಜಾತಾ ಚಲವಾದಿ, ನಿಸ್ಸಾರ್‌ಅಹಮ್ಮದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿಯಾಗಿದ್ದರು. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಗಟ್ಟಿ ಸಾಹಿತ್ಯದ ಬೇರುಗಳನ್ನು ಕನ್ನಡಿಗರ ಜೀವಾಳದಲ್ಲಿ ಆಳವಾಗಿ ಬೇರುರುವಂತೆ ಮಾಡಿದ್ದಾರೆ. ಹೃನ್ಮನ ತಣಿಸುವ ಸಾಹಿತ್ಯದ ಮೂಲಕ ಜನಮಾನಸದಲ್ಲಿ ನಿತ್ಯೋತ್ಸವ ಕವಿ, ಕನ್ನಡ ತಾಯಿಯ ನಿತ್ಯ ಉತ್ಸವ ಬಯಸುವ ಆಶಯ ಹೊಂದಿದ್ದರು. ಇಂತಹ ಮಹಾನ್ ಚೇತನರ ನುಡಿನಮನ ಅರ್ಥಪೂರ್ಣವಾಗಿದೆ ಎಂದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಎಂ ಸಿ ಮುಲ್ಲಾ ಮಾತನಾಡಿದರು.
ಸಮಾರಂಭದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಸಯ್ಯದಜುಬೇರ ಕೆರೂರ, ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯು ಐ ಶೇಖ, ಖ್ಯಾತ ನ್ಯಾಯವಾದಿ ಎ ಎಂ ತಾಂಬೋಳಿ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಬಿ ಎನ್ ವಡಗೇರಿ, ಅಲ್ತಾಫ ಸಾಲೋಟಗಿ, ವಿಜುಗೌಡ ಕಾಳಶೆಟ್ಟಿ, ಸಿ ಬಿ ಗಡಗಿ, ಎ ಎಚ್ ವಾಲೀಕಾರ, ಎಂ ಡಿ ಮಳಖೇಡ ಸೇರಿದಂತೆ ಮತ್ತೀತರರಿದ್ದರು. ದೇವರಹಿಪ್ಪರಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕಬೂಲ್ ಕೊಕಟನೂರ ಸ್ವಾಗತಿಸಿದರು. ಶಿಕ್ಷಕ ಅರುಣ ಕೋರವಾರ ನಿರೂಪಿಸಿ ವಂದಿಸಿದರು.
ಫೋಟೋ: ವಿಜಯಪುರ ನಗರದಲ್ಲಿ ಅಮ್ಮ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ನಿತ್ಯೋತ್ಸವ ಕವಿಗೆ ನುಡಿನಮನ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಗಣ್ಯರು ಉದ್ಘಾಟಿಸಿದರು.

WhatsApp Group Join Now
Telegram Group Join Now
Share This Article