ರಾಯಬಾಗ: ಪದವೀಧರ ಪ್ರಾಥಮಿಕ (೬-೮) ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ಅವರಿಗೆ ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ರಾಯಬಾಗ ಘಟಕದ ಪದಾಧಿಕಾರಿಗಳು ಮತ್ತು ಶಿಕ್ಷಕರು ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಸತ್ರಾಜ ಕಾಂಬಳೆ ಮಾತನಾಡಿ, ಜಿಪಿಟಿ ಶಿಕ್ಷಕರ ಬೇಡಿಕೆಗಳಾದ ೨೦೨೩-೨೪ನೇ ಸಾಲಿನಲ್ಲಿ ನೇಮಕವಾದ ಪದವೀಧರ ಪ್ರಾಥಮಿಕ ೬೭ ಶಿಕ್ಷಕರ ಬಾಕಿ ಉಳಿದಿರುವ ವೇತನವನ್ನು ಶೀಘ್ರ ಜಮೆ ಮಾಡಬೇಕು, ಖಾಯಂ ಸೇವಾ ಪರೀಕ್ಷಾ ಅವಧಿಯ ಕುರಿತಾದ ಅರ್ಜಿಗಳನ್ನು ಇಇಡಿಎಸ್ ನಲ್ಲಿ ಭರ್ತಿ ಮಾಡಿ, ಉಪನಿರ್ದೇಶಕರ ಕಚೇರಿಗೆ ಕೂಡಲೇ ಸಲ್ಲಿಸಬೇಕು, ಮರುನೇಮಕಾತಿ ಹೊಂದಿದ ಶಿಕ್ಷಕರ ಮಾಹಿತಿಯನ್ನು ಹಾಗೂ ಅವರ ಅರ್ಜಿಗಳನ್ನು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಕಳುಹಿಸಿ ಶೀಘ್ರವಾಗಿ ಈ ಶಿಕ್ಷರು ಕೂಡ ೭ನೇ ವೇತನ ಆಯೋಗದ ವೇತನ ಪಡೆಯುವಂತೆ ಕ್ರಮಕೈಗೊಳ್ಳಬೇಕು, ಹೆಚ್ಚುವರಿ ವರ್ಗಾವಣೆಯಲ್ಲಿ ವರ್ಗಾವಣೆ ಹೊಂದಿದ ಶಿಕ್ಷಕರದ್ದು ಇಇಡಿಎಸ್ ನಲ್ಲಿ ಪ್ರಸ್ತುತ ಶಿಕ್ಷಕರು ಸೇವೆ ಸಲ್ಲಿಸುತ್ತಿರುವ ಶಾಲೆಗಳ ಹೆಸರುಗಳು ಬರುವಂತೆ ಮಾಡಿ, ಎಲ್ಬಿಎ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು, ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿಯ ಯೋಜನೆಯಲ್ಲಿ ಶಿಕ್ಷಕರ ಅವಲಂಬಿತರ ಹೆಸರುಗಳನ್ನು ಶೀಘ್ರವಾಗಿ ಸೇರ್ಪಡೆಗೊಳಿಸಿ, ಅವರಿಗೆ ಆರೋಗ್ಯ ಸಂಜೀವಿನಿಯ ಪ್ರಮಾಣ ಪತ್ರವನ್ನು ವಿತರಿಸಬೇಕು, ಶಿಕ್ಷಕರ ಸೇವಾ ಪುಸ್ತಕದಲ್ಲಿ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಒತ್ತಾಯಿಸಿದರು.
ಜಿಪಿಟಿ ಸಂಘದಿಂದ ಬಿಇಒ ಕಚೇರಿಗೆ ೨-೩ ಬಾರಿ ಲಿಖಿತ ಮತ್ತು ಮೌಖಿಕವಾಗಿ ಮನವಿ ಸಲ್ಲಿಸಿದರೂ, ಇನ್ನುವರೆಗೆ ನಮ್ಮ ಮನವಿಗೆ ಸ್ಪಂದಿಸಿರುವುದಿಲ್ಲ. ಶೀಘ್ರವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಿಇಒ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಬಸವರಾಜಪ್ಪ, ಪದವೀಧರ ಪ್ರಾಥಮಿಕ ಶಿಕ್ಷಕರ ಕೆಲವೊಂದು ಬೇಡಿಕೆಗಳಿಗೆ ಸಕಾರಾತ್ಮವಾಗಿ ಸ್ಪಂದಿಸಿ ಈಡೇರಿಸಲಾಗಿದೆ, ನಮ್ಮ ವ್ಯಾಪ್ತಿಗೆ ಬರುವ ಶಿಕ್ಷಕರ ಇನ್ನುಳಿದ ಎಲ್ಲ ಬೇಡಿಕೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸತ್ರಾಜ ಕಾಂಬಳೆ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಈರಗಾರ, ಗೌರವಾಧ್ಯಕ್ಷ ಶಿವಾನಂದ ಗೋಟುರ, ಕಾರ್ಯಾಧ್ಯಕ್ಷ ಕೃಷ್ಣಾ ಮೊರಬ, ಖಜಾಂಚಿ ಸಂಜೀವ ಮಾಂಗ, ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಕೊಣ್ಣೂರ, ಸಂಘಟನಾ ಕಾರ್ಯದರ್ಶಿ ಪ್ರವೀಣ ಕಾಂಬಳೆ, ನಿಂಗಪ್ಪ ಠಕ್ಕಣ್ಣವರ, ಸಂಜೀವ ಜಾಂಬರ, ವಿಠಲ ಮೇಖಳಿ, ಕುಮಾರ ಮಾನೆ, ಕಲ್ಮೇಶ ಕೋರೆ, ರಮೇಶ ಮಾಳಿ ಹಾಗೂ ಶಿಕ್ಷಕರು ಇದ್ದರು.
ಫೋಟೊ: ೦೭ ರಾಯಬಾಗ ೧
ಫೋಟೊ ಶೀರ್ಷಿಕೆ: ರಾಯಬಾಗ: ಪದವೀಧರ ಪ್ರಾಥಮಿಕ (೬-೮) ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಇಒ ಬಸವರಾಜಪ್ಪ ಆರ್. ಅವರಿಗೆ ಕರ್ನಾಟಕ ರಾಜ್ಯ (೬-೮) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ರಾಯಬಾಗ ಘಟಕದ ಪದಾಧಿಕಾರಿಗಳು ಮತ್ತು ಶಿಕ್ಷಕರು ಮನವಿ ಸಲ್ಲಿಸಿದರು.


