ಚ ಕಿತ್ತೂರು: ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಪಾತ್ರವೂ ಬಹು ಮುಖ್ಯವಾಗಿದ್ದು ಶಿಕ್ಷಕರೇ ಎಲ್ಲ ಜವಾಬ್ದಾರಿ ವಹಿಸಲಿ ಎಂದು ಹೇಳಿ ತಾವು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವಂತಾಗಬಾರದೆಂದು ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪಾಲಕರ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ತಾಲ್ಲೂಕಿನ ಎಲ್ಲಾ 10 ನೇ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರಚಿಸಲಾದ ಪಠ್ಯ ವಿಷಯಗಳನ್ನು ಹಂಚಲಾಗಿದ್ದಲ್ಲದೇ ಶಾಲೆಗಳಲ್ಲಿ ಶಾಲಾವಧಿ ಮೀರಿ ಹೆಚ್ಚಿನ ತರಬೇತಿಯನ್ನೂ ನೀಡಲಾಗುತ್ತಿದೆ.ಇದರ ಜೊತೆಗೆ 50 ವಿಶೇಷ ವಿದ್ಯಾರ್ಥಿಗಳನ್ನು ಆರಿಸಿ ಅವರಿಗೆ ವಿಶೇಷ ತರಬೇತಿ ನೀಡಲು ಪ್ರಾರಂಭಿಸಿದ್ದು ನೂರಕ್ಕೆ ನೂರು ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು, ಆಧುನಿಕತೆಯ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನಾವು ನೀಡಬೇಕಾಗಿದೆ ಎಂದು ನುಡಿದರು.
ತಹಸೀಲ್ದಾರ ಕೆ, ಆರ್, ಪಾಟಿಲ ಮಾತನಾಡಿ ಈ ಬಾರಿ ಎಸ್ ಎಸ್ ಎಲ್ ಸಿ,ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದವರಿಗೆ ತಾಲೂಕಾ ಆಡಳಿತದಿಂದ 5 ಸಾವಿರ ರೂಪಾಯಿಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುವುದಲ್ಲದೇ ಗಣಿತ ವಿಷಯದಲ್ಲಿ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ತಾವು ವೈಯಕ್ತಿಕವಾಗಿ 1 ಸಾವಿರ ರೂಪಾಯಿಗಳನ್ನು ಕೊಡುವುದಾಗಿ ಘೋಷಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ, ವಯ್,ತೂಬಾಕಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈ ಸಿದ್ದರಾಮ ಮಾರಿಹಾಳ, ತಾಲೂಕ ಪಂಚಾಯತ ಅಧಿಕಾರಿ ಮಸಳಿ,ಆರಕ್ಷಕ ವೃತ್ತ ನಿರೀಕ್ಷಕ ಶಿವಾನಂದ. ಗುಡಗನಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ, ಸಹಾಯಕ ನಿರ್ದೇಶಕಿ ಮಹಾದೇವಿ ಕೂಡುವಕ್ಕಲಿಗಿ,ಡಾ. ಚಂದ್ರಶೇಖರ ಹಲಸಗಿ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸಾಧನೆಯಲ್ಲಿ ಪಾಲಕರ ಪಾತ್ರವೂ ಬಹು ಮುಖ್ಯ : ಬಾಬಾಸಾಹೇಬ ಪಾಟೀಲ


