ಬಳ್ಳಾರಿ:ಫೆ,07..- ‘ಕರ್ನಾಟಕ ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿ ಗಳಿಗೆ ಕೇಂದ್ರ ಸರ್ಕಾರ10175 ಕೋಟಿ ಅನುದಾನ ನೀಡಬೇಕಾಗಿರುವುದು ಬಾಕಿ ಯಿದ್ದು. ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಆಗ್ರಹಿಸಿದ್ದಾರೆ.
ಅವರು ಮೊನ್ನೆ ಶೂನ್ಯ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿ, ‘ಹಣಕಾಸು ಆಯೋಗದ ಎಲ್ಲ ಅರ್ಹತೆಗಳನ್ನು ರಾಜ್ಯ ಸರ್ಕಾರ ಪೂರೈಸಿದ್ದರೂ,
15ನೇ ಹಣಕಾಸು ಆಯೋಗದ ಅಡಿಯಲ್ಲಿ 6000 ಗ್ರಾಮಗಳಿಗೆ 2133 ಕೋಟಿ ರು. ಅನುದಾನವನ್ನು ಕೇಂದ್ರ ಇನ್ನು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಮೂಲಸೌಕರ್ಯಗಳಿಗೆ ತಡೆಯಾಗುತ್ತಿದೆ ಎಂದಿದ್ದಾರೆ.
ಮೊದಲ ಹಂತದ 1,092 ಕೋಟಿಯ ಅನುದಾನವೂ ಬಿಡುಗಡೆ ಆಗಿಲ್ಲ. ನಿಧಿಗಳನ್ನು ನಿರಂತರವಾಗಿ ತಡೆಹಿಡಿಯುವುದು ನ್ಯಾಯಸಮ್ಮತವಲ್ಲದೆ, ಗ್ರಾಮೀಣ ಆಡಳಿತಕ್ಕೆ ತೀವ ಹಾನಿಯನ್ನು ಉಂಟುಮಾಡುತ್ತಿದೆ. ಇದರಿಂದ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಅಗತ್ಯ ಸಿಬ್ಬಂದಿಗಳ ವೇತನ ಪಾವತಿಸಲು ಪಂಚಾಯತಿಗಳಿಗೆ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ವ್ಯವಸ್ಥೆ, ಒಳಚರಂಡಿ, ಸ್ವಚ್ಛತೆ ಮತ್ತು ಬೀದಿ ದೀಪಗಳ ನಿರ್ವಹಣೆ ಸಮಪರ್ಕವಾಗಿ ಆಗುತ್ತಿಲ್ಲ. ಹಲವಾರು ಪಂಚಾಯತಿಗಳ ಖಾತೆಗಳಲ್ಲಿ ಮೂಲಭೂತ ವೆಚ್ಚಗಳನ್ನು ಸಹ ಭರಿಸಲು ಹಣವಿಲ್ಲದ ಸ್ಥಿತಿ ಉಂಟಾಗಿದೆ.
15ನೇ ಹಣಕಾಸು ಆಯೋಗವನ್ನು ವಿಶೇಷವಾಗಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಗ್ರಾಮ ಪಂಚಾಯತಿಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಉದ್ದೇಶದಿಂದ ನೇಮಿಸಲಾಗಿತ್ತು. ಇದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ 1,066 ಕೋಟಿಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ 6,976 ಕೋಟಿಗಳು ಬಾಕಿಯಿದೆ.
ಆದ್ದರಿಂದ, 15 ನೇ ಹಣಕಾಸು ಆಯೋಗ ಮತ್ತು ಇತರ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಇರುವ 10175 ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ


