ಬೆಳಗಾವಿ, ಏಪ್ರಿಲ್ 11: ಉತ್ಸಾಹದ ಬದುಕನ್ನು ಬದುಕಲು ಕಲಿಸಿ,ನಮ್ಮ ಕಣ್ಣೆದುರಿಗೆ ಇಲ್ಲದಿದ್ದರೂ ಸದಾ ಕಾಲವೂ ನಮ್ಮ ಸ್ಮೃತಿ ಪಟಲದ ಮುಂದೆ ಗೋಚರಿಸುವ ಶರಣರ,ಸಂತರ,ದಾರ್ಶನಿಕರ, ಮಹಾಂತರ ಹಾಗೂ ಯುಗ ಪುರುಷರ ಜಯಂತಿಯನ್ನು ಸಾಮಾನ್ಯವಾಗಿ ಆಚರಿಸುತ್ತ ಬರಲಾಗಿದೆ. ಜಗದ ಜನರಿಗೆ ಜೀವನದ ಜಂಜಡದಿಂದ ಹೊರಬಂದು ನೆಮ್ಮದಿಯಿಂದ ಜೀವನ ಸಾಗಿಸುವ ಸನ್ಮಾರ್ಗವನ್ನು ತೋರಿಸಿಕೊಟ್ಟ ಹನ್ನೆರಡನೆಯ ಶತಮಾನದ ಶರಣರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಅನುಭವ ಮಂಟಪದ ಅದ್ಯಕ್ಷರಾದ ಅಲ್ಲಮಪ್ರಭು ದೇವರು.
ಅಲ್ಲಮ ಅಂದರೆ ಬೆಳಕಿನ ಮೂಲ ಸತ್ಯವನ್ನು ಅರಿತವರು ಅಂತ ಅರ್ಥ. ಸದೈವ ಜಾಗೃತಿ ಜೀವನಕ್ಕೆ ಕರೆಕೊಟ್ಟು ಜೀವನವನ್ನು ಜಯಸಿದವರು. ನಿತ್ಯ ನೂತನವಾದದ್ದು ಸತ್ಯವೇ ಅದರ ಚಿದಂಶವು ನಾವು ಅನ್ನುವದನ್ನು ಅರಿತು ಬದುಕಬೇಕೆಂಬುದನ್ನ ಕಲಿಸಿದವರು, ಶೂನ್ಯ ಪೀಠಕ್ಕೆ ಘನತೆಯನ್ನು ತಂದು ಕೊಟ್ಟು,ಹಲವಾರು ಬೆಡಗಿನ ವಚನಗಳ ರಚಿಸಿ ಮಾನವಕುಲಕ್ಕೆ ಬೆಳಕನ್ನು ತೋರಿದವರು ಅಲ್ಲಮಪ್ರಭು ದೇವರು. ಅವರು ತೋರಿಸಿದ ಬೆಳಕಿನ ಮಾರ್ಗದಲ್ಲಿ ಬಾಳಿ ಬದುಕಿ ನಮ್ಮನಮ್ಮ ಬದುಕನ್ನು ಹಸನಗೊಳಿಸಿಕೊಂಡು ಬದುಕಬೇಕು ಅಲ್ಲದೆ ನಮ್ಮ ಜನ್ಮ ಸಾರ್ಥಕತೆಯ ಜೀವನ ಪಡೆದುಕೊಳ್ಳಬಹುದು ಎಂದು ಇಂದು (೮/೪/೨೦೨೪) ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಆಯೋಜಿಸಿದ್ದ ಶೂನ್ಯ ಪೀಠಾಧೀಶ ಅಲ್ಲಮ ಪ್ರಭುದೆವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ತಮ್ಮ ಅನುಭಾವದ ನುಡಿಗಳ ನೀಡಿದ ಬೆಳಗಾವಿಯ ಬಸವತತ್ವ ಅನುಭಾವ ಕೇಂದ್ರದ ಪೂಜ್ಯ ವಾಗ್ದೇವಿ ತಾಯಿಯವರು ಮೇಲಿನಂತೆ ಹೇಳಿದರು.
ಸಮಾರಂಭದಲ್ಲಿ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಡಾ.ಅಲ್ಲಮಪ್ರಭು ಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ ಬೆಳಗಾವಿ ಅವರು ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಮ್ಮ ಜೀವನ ಪಾವನಗೊಳಸಿಕೊಳ್ಳಬೇಕು.ಮೆಲಿಂದ ಮೇಲೆ ಇಂತಹ ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಬೇಕು.ವಚನಗಳ ಸಾರವನ್ನು ನಮ್ಮ ಯುವಕರಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮ ತಾಯಂದಿರ ಮೇಲಿದೆ ಅಂತಾ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅದ್ಯಕ್ಷರಾದ ಶರಣ ಬಸವರಾಜ ರೊಟ್ಟಿ ಅವರು ಬಸವ ಜಯಂತಿಯನ್ನು ಆಚರಿಸುವ ಕುರಿತು ತಯಾರಿಸಿದ ರೂಪ ರೇಷೆಗಳನ್ನು ವಿವರಿಸಿದರು.ಸರ್ವರೂ ಬಸವ ಜಯಂತಿಯಲ್ಲಿ ಭಾವಹಿಸಿ ಯಶಸ್ವಿಗೊಳಿಸಲು ಕೋರಿದರು.
ಇಂದಿನ ಪ್ರಸಾದ ದಾಸೋಹಿಗಳಾದ ಭಾರತಿ ಪ್ರಕಾಶ ರಾಮಗುರವಾಡಿ ಶರಣ ದಂಪತಿ ಷಟ್ ಸ್ಥಲ ಧ್ವಜಾರೋಹಣ ಮಾಡಿದರು. ಮೊದಲು ಪೂಜ್ಯ ಕುಮುದಿನಿ ತಾಯಿ ಅವರಿಂದ ವಚನ ಸಂಗೀತ ಸೇವೆ ಜರುಗಿತು. ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಜಿಲ್ಲಾ ಘಟಕದ ಕಾರ್ಯದರ್ಶಿ ಶರಣೆ ಸುಜಾತ ಮತ್ತಿಕಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಸರ್ವರನ್ನು ಸ್ವಾಗತಿಸಿದರು.ಮಹಿಳಾ ತಾಲೂಕು ಘಟಕದ ಶರಣೆ ಅನುಸೂಯ ಬಶೆಟ್ಟಿ ಅವರು ನಿರೂಪಣೆ ಮಾಡಿದರು.ಶರಣೆ ಪ್ರೇಮಾ ಚಿನಿವಾಲ ಶರಣು ಸಮರ್ಪಣೆ ಮಾಡಿದರು.
ಸಮಾರಂಭದಲ್ಲಿ ಅಶೋಕ ಮಳಗಲಿ ,ಅರವಿಂದ ಪರುಶೆಟ್ಟಿ,ಚಂದ್ರಪ್ಪ ಬೂದಿಹಾಳ,ಈರಣ್ಣ ಚಿನಗುಡಿ,ಗುರವಣ್ಣವರ,ರುದ್ರಗೌಡರ,ಮುರಿಗೆಪ್ಪ ಬಾಳಿ,ಮಹಾನಂದಾ ಪರುಶೆಟ್ಟಿ,ರತ್ನಾ ಬೆನಚಮರ್ಡಿ,ಅನ್ನಪೂರ್ಣ ಮಳಗಲಿ,ಮೋಹನ ಗುಂಡ್ಲೂರ,ಶಂಕರ ಗುಡಗನಟ್ಟಿ,ಬಸವರಾಜ ಚಟ್ಟರ,ಅನಿತಾ ಚಟ್ಟರ,ಸದಾನಂದ ಬಶೆಟ್ಟಿ,ಸುಧಾ ರೊಟ್ಟಿ,ಸುಲೋಚನಾ ವಸ್ತ್ರದ,ಪ್ರೀತಿ ಮಠದ, ಕೆಂಪಣ್ಣ ,ನೇತ್ರಾ ರಾಮಾಪೂರಿ, ಶ್ರೀ ಮತಿ ಕಲ್ಪನಾ ಗುತ್ತಿಗೋಳಿ,ಸುವರ್ಣಾ ತಿಗಡಿ,ಮಂಗಲಾ ಕಾಕತಿಕರ ಅಲ್ಲದೇ ವಿವಿಧ ಬಡಾವಣೆಯ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.