ಅಥಣಿ: ಸಹಕಾರ ಕ್ಷೇತ್ರವು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಆರ್ಥಿಕ ಸ್ವಾವಲಂಬನೆಗೆ ಬಲ ನೀಡುವ ಪ್ರಮುಖ ಸಾಧನವಾಗಿದೆ. ಇಂತಹ ಸಹಕಾರ ಮನೋಭಾವದ ಫಲವಾಗಿ ಸ್ಥಾಪಿತವಾದ ರವಿಅಣ್ಣಾ ಪೂಜಾರಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಇಂದು ತನ್ನ ೧೬ನೇ ವಸಂತವನ್ನು ಯಶಸ್ವಿಯಾಗಿ ಪೂರೈಸಿ, ಸದಸ್ಯರು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಘದ ಅಧ್ಯಕ್ಷ ರವಿ ಪೂಜಾರಿ ಹೇಳಿದರು.
ಅಥಣಿ ಪಟ್ಟಣದ ರವಿಅಣ್ಣಾ ಪೂಜಾರಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವಿ ಪೂಜಾರಿ ಮಾತನಾಡಿ ಸ್ಥಾಪನೆಯ ಆರಂಭಿಕ ದಿನಗಳಲ್ಲಿ ಸಂಘವು ಸೀಮಿತ ಸಂಪನ್ಮೂಲಗಳೊAದಿಗೆ ಕಾರ್ಯಾರಂಭಿಸಿದರೂ, ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಸಮರ್ಪಿತ ಸೇವೆ ಹಾಗೂ ಶಿಸ್ತಿನ ಹಣಕಾಸು ನಿರ್ವಹಣೆಯಿಂದ ಕ್ರಮೇಣ ಬೆಳವಣಿಗೆ ಹೊಂದಿದ್ದು ಕಳೆದ ೧೬ ವರ್ಷಗಳಲ್ಲಿ ಸಂಘವು ಕೇವಲ ಉಳಿತಾಯ ಮತ್ತು ಸಾಲ ಸೇವೆಗಳಷ್ಟೇ ಅಲ್ಲದೆ, ವಿವಿಧೋದ್ದೇಶಗಳ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಂಡು ಜನಸಾಮಾನ್ಯರ ಬದುಕಿಗೆ ಸಹಾಯಕರವಾಗಿದೆ ಎಂದು ಹೇಳಿದರು.
ಈ ವೇಳೆ ಸಂಘದ ಪದಾಧಿಕಾರಿಯಾದ ರಾವಸಾಬ ಐಹೋಳೆ ಮಾತನಾಡಿ ೧೬ ವರ್ಷಗಳ ಈ ಪಯಣದಲ್ಲಿ ಸಂಘವು ನಂಬಿಕೆ, ಶ್ರಮ ಮತ್ತು ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಜನ ಸೇವೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತೃತ ಸೇವೆಗಳನ್ನು ಒದಗಿಸುವುದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂಘವು ಸಹಕಾರ ಕ್ಷೇತ್ರದಲ್ಲಿ ಮಾದರಿಯಾಗುವ ಗುರಿ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ರವಿ ಪೂಜಾರಿ ಆಡಳಿತ ಮಂಡಳಿ ಸದಸ್ಯರಾದ ರಾವಸಾಬ ಐಹೋಳೆ, ಸಿದ್ದು ಪಾಟೀಲ ಅಣ್ಣಾಸಾಹೇಬ ತೆಲಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು


