ಬಳ್ಳಾರಿ, ಫೆ.05: ಕಳೆದ 10 ದಿನಗಳ ಕಾಲ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಕೆಲಸಕ್ಕೆ ಬಾರದ, ಅನಾರೋಗ್ಯಕರವಾದ ವಿಷಯಗಳ ಬಗ್ಗೆ ಮಾತನಾಡಲಾಗಿದೆ ಹೊರತು. ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಸದನ ನಡೆದ ಬಗ್ಗೆ ಬೇಸರದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜನರಿಗೆ ಅನುಕೂಲವಾಗುವಂತಹ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಆಗಲಿಲ್ಲ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗಿಲ್ಲ. ಪ್ರಧಾನಿ ಮೋದಿ ಅವರ ಕುರಿತು ಕಾಂಗ್ರೆಸ್ನ ನಸೀರ್ ಅಹಮದ್ ಆಡಿದ ಮಾತು ಹಾಗೂ ಬಿಜೆಪಿಯ ಸಿ.ಟಿ.ರವಿ ಅವರು ಹೇಳಿದ ‘ಪಾಕಿಸ್ತಾನ ನಾಲಗೆ’ ಪದ ಕುರಿತು ಮಂಗಳವಾರ ಇಡೀ ದಿನ ಹಾಗೂ ಬುಧವಾರ ಅದೇ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಗೆ ನಡೆದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಕಳೆದ 10 ದಿನಗಳ ಅಧಿವೇಶನ ನೀರು ಪಾಲಾಗಿದೆ. ಅಭಿವೃದ್ಧಿ ಬಗ್ಗೆ ನಾವ್ಯಾರಾದರೂ ಮಾತನಾಡಿದ್ದೇವೆಯೇ, ಚರ್ಚೆ ನಡೆದಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಅಧಿವೇಶನದಲ್ಲಿ ಕೇವಲ ವೈಯಕ್ತಿಕ ಮಟ್ಟದ ಹೋರಾಟ ನಡೆಯುತ್ತಿದೆ, ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲವೇ, ಚರ್ಚಿಸುವಂತಹ ಯಾವುದೇ ವಿಷಯ ನಮ್ಮ ಮುಂದೇ ಇಲ್ಲವೇ, ನಮ್ಮ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲವೇ, ಅಧಿವೇಶನದಲ್ಲಿ ನಾನ್ಸೆನ್ಸ್, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಅನಾರೋಗ್ಯಕರ ಚರ್ಚೆ ನಡೆದಿದೆ ಎಂದಿದ್ದಾರೆ.


