ನಿಷೇಧಿತ ಪದ ಬಳಕೆ ಮಾಡಿದ ಸಂತೋಷ್ ಲಾಡ್ ಕ್ಷಮೆ ಯಾಚಿಸಲಿ : ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಆಗ್ರಹ

Sandeep Malannavar
ನಿಷೇಧಿತ ಪದ ಬಳಕೆ ಮಾಡಿದ ಸಂತೋಷ್ ಲಾಡ್ ಕ್ಷಮೆ ಯಾಚಿಸಲಿ : ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಆಗ್ರಹ
WhatsApp Group Join Now
Telegram Group Join Now
ಬಳ್ಳಾರಿ, ಫೆ. 05: ರಾಜ್ಯ ವಿಧಾನಸಭೆ ಅಧಿವೇಶನದ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸವಿತಾ ಸಮಾಜಕ್ಕೆ ಸಂಬಂಧಿಸಿದಂತೆ ನಿಷೇಧಿತ ಪದ ಬಳಸಿರುವುದು ತೀವ್ರ ಖಂಡನೀಯವಾಗಿದೆ. ಇದರಿಂದ ರಾಜ್ಯದ ಸವಿತಾ ಸಮಾಜಕ್ಕೆ ಅಪಮಾನವಾಗಿದೆ. ಈ ಕುರಿತು ಸಚಿವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ ಆಗ್ರಹಿಸಿದರು.
ಈ ಸಂಬಂಧ ಅವರು ಇಂದು ಬಳ್ಳಾರಿಯ ಸ್ಥಳೀಯ ತಹಸೀಲ್ದಾರ್ ರೇಣುಕಾ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಫೆಬ್ರವರಿ 02ರಂದು ವಿಧಾನಸಭೆ ಆವರಣದಲ್ಲಿ ಅಧಿವೇಶನ ನಡೆಯುವ ವೇಳೆ ಮಾಧ್ಯಮಗಳ ಎದುರು ಕೇಂದ್ರ ಸರ್ಕಾರದ ಬಜೆಟ್ ಕುರಿತು ವ್ಯಂಗ್ಯವಾಗಿ ಮಾತನಾಡುತ್ತಾ ಸವಿತಾ ಸಮಾಜಕ್ಕೆ ಸಂಬಂಧಿಸಿದ ನಿಷೇಧಿತ ಪದ ಬಳಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿಯೂ ನಮ್ಮ ಸಮಾಜದ ವಿರುದ್ಧ ಜಾತಿಯಿಂದನೆ ಮಾಡಿರುವುದು ಅತೀವ ಬೇಸರ ತಂದಿದೆ ಎಂದು ಅವರು ತಿಳಿಸಿದರು.
ಜಾತಿನಿಂದನೆ ಪದಗಳನ್ನು ನಿಷೇಧಿಸಿ ಹಲವು ದಶಕಗಳಾದರೂ ಸಹ ಇಂದಿಗೂ ನಮ್ಮ ಸಮಾಜವನ್ನು ಕೀಳುಮಟ್ಟದಲ್ಲಿ ಅವಹೇಳನ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದು ಅತ್ಯಂತ ಹೀನಾಯ ಸಂಗತಿಯಾಗಿದೆ. ತಲಾತಲಾಂತರದಿಂದ ಕ್ಷೌರಿಕ ವೃತ್ತಿ ನಿರ್ವಹಿಸುತ್ತಾ ಬಂದಿರುವ ಸವಿತಾ ಸಮಾಜವು ವೃತ್ತಿಯ ಜೊತೆಗೆ ಎಲ್ಲಾ ಧರ್ಮ ಹಾಗೂ ಜಾತಿಗಳ ಶುಭಕಾರ್ಯಗಳಲ್ಲಿ ಮಂಗಳವಾದ್ಯ, ಬ್ಯಾಂಡ್ ಸೇವೆ ಹಾಗೂ ನಾಟಿ ವೈದ್ಯ ಪದ್ಧತಿಗಳ ಮೂಲಕ ಸಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದೆ ಎಂದು ಹೇಳಿದರು.
ಶತಶತಮಾನಗಳಿಂದ ಕುಲಕಸಬನ್ನೇ ಕರ್ತವ್ಯವೆಂದು ನಿರ್ವಹಿಸಿಕೊಂಡು ಬಂದಿರುವ ನಮ್ಮ ಸಮಾಜವು ಇತರ ಸಮಾಜಗಳ ಸುಧಾರಣೆಯಲ್ಲಿಯೂ ತನ್ನದೇ ಆದ ಪಾತ್ರ ವಹಿಸಿಕೊಂಡಿದೆ. ಆದರೂ ಇತ್ತೀಚೆಗೆ ರಾಜಕಾರಣಿಗಳಿಂದ ಪದೇಪದೇ ಅವಹೇಳನಕ್ಕೆ ತುತ್ತಾಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಜಾತಿಯಿಂದನೆ ಮಾಡುವ ಘಟನೆಗಳು ಹೆಚ್ಚಾಗುತ್ತಿರುವುದು ದುರದೃಷ್ಟಕರವಾಗಿದೆ. ಈ ಹಿಂದೆ ಸಹ ಜನಪ್ರತಿನಿಧಿಗಳು ಜಾತಿಯಿಂದನೆ ಪದ ಬಳಸಿದ ಸಂದರ್ಭಗಳಲ್ಲಿ ಹೋರಾಟ ನಡೆಸಿದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ದುರುದ್ದೇಶಪೂರಿತವಾಗಿದೆ. ರಾಜಕಾರಣಿಗಳು ಇಂತಹ ಚಾಳಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡುವವರ ಮನೆ ಮುಂದೆ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಂ. ದೇವಣ್ಣ, ಖಜಾಂಚಿ ಬಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್. ರಾಮು, ಸದಸ್ಯರಾದ ತಿಮ್ಮಪ್ಪ, ತಿಪ್ಪಣ್ಣ, ಅನಿಲ್, ವೆಂಕಟೇಶ್, ತಿಪ್ಪೇಸ್ವಾಮಿ, ಉಮೇಶ್, ಕೃಷ್ಣಮೂರ್ತಿ, ನಾಗೇಶ್, ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article