ಬಳ್ಳಾರಿ,03..: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು (ಲೇಬರ್ ಕೋಡ್ಗಳು) ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ, ಸಂಘಟಿತ ಕಾರ್ಮಿಕ ಚಳುವಳಿಯನ್ನು ದುರ್ಬಲಗೊಳಿಸುವ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿವೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಸತ್ಯಬಾಬು ಅವರು ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕೆಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12, 2026ರಂದು ದೇಶದಾದ್ಯಂತ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ ಎಂದು ತಿಳಿಸಿದರು. ರಾಷ್ಟ್ರಮಟ್ಟದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕರ್ನಾಟಕದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಈ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿವೆ ಎಂದರು.
ಮುಷ್ಕರದ ಅಂಗವಾಗಿ ಬಳ್ಳಾರಿಯಲ್ಲಿ ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಸಭೆ ನಡೆಯಲಿದೆ. ವಿವಿಧ ಕ್ಷೇತ್ರಗಳಿಗೆ ಸೇರಿದ ಸಾವಿರಾರು ಕಾರ್ಮಿಕರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಲೇಬರ್ ಕೋಡ್ಗಳಿಂದ ಕಾರ್ಮಿಕರ ಬದುಕು ಸುಧಾರಣೆಯಾಗುತ್ತದೆ ಎಂಬುದು ಸರ್ಕಾರದ ಸುಳ್ಳು ಪ್ರಚಾರ ಮಾತ್ರ ಎಂದು ಟೀಕಿಸಿದ ಸತ್ಯಬಾಬು, ಮುಷ್ಕರದ ಹಕ್ಕು ಕಸಿದುಕೊಳ್ಳುವುದು, ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವುದು, ಗುತ್ತಿಗೆ ಪದ್ಧತಿಯನ್ನು ಕಾನೂನುಬದ್ಧಗೊಳಿಸುವುದು, ದಿನಕ್ಕೆ 12 ಗಂಟೆಗಳ ಕೆಲಸದ ಅವಧಿ ವಿಧಿಸುವುದು ಹಾಗೂ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಲು ಅವಕಾಶ ನೀಡಿರುವುದು ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಅಪಾಯಕಾರಿಯಾಗಿದೆ ಎಂದರು.
“ವ್ಯಾಪಾರ ಸುಗಮತೆ” ಹೆಸರಿನಲ್ಲಿ ಮಾಲೀಕರ ಲಾಭಕ್ಕಾಗಿ ಕಾರ್ಮಿಕರ ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ತಿದ್ದುಪಡಿ ಪ್ರಕ್ರಿಯೆಯನ್ನೇ ಇಂದಿನ ಬಿಜೆಪಿ ಸರ್ಕಾರ ಸಂಹಿತೀಕರಣದ ರೂಪದಲ್ಲಿ ಜಾರಿಗೊಳಿಸುತ್ತಿದೆ. ಇದಕ್ಕೂ ಮಿಕ್ಕಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೂ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ನಿಯಮ ರೂಪಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ. ಯಾವುದೇ ಕಾರಣಕ್ಕೂ ಲೇಬರ್ ಕೋಡ್ಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಬಾರದು ಎಂದು ಜೆಸಿಟಿಯು ಆಗ್ರಹಿಸುತ್ತದೆ ಎಂದು ಹೇಳಿದರು.
ಸರ್ಕಾರ ರೈಲ್ವೆ, ಬಂದರು, ಕಲ್ಲಿದ್ದಲು ಗಣಿಗಳು, ತೈಲ, ಉಕ್ಕು, ರಕ್ಷಣಾ, ರಸ್ತೆಮಾರ್ಗ, ವಿಮಾನ ನಿಲ್ದಾಣ, ಬ್ಯಾಂಕು, ವಿಮೆ, ದೂರಸಂಪರ್ಕ, ಅಂಚೆ, ಪರಮಾಣುಶಕ್ತಿ, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಿಸಿ ದೇಶಿ–ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು. ಇದರಿಂದ ಸ್ಥಳೀಯ ಕೈಗಾರಿಕೆ, ಸ್ವಾವಲಂಬಿ ಆರ್ಥಿಕತೆಗೆ ಭಾರೀ ಅಪಾಯ ಎದುರಾಗಿದೆ ಎಂದರು.
65 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳ ಭರ್ತಿ, ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಖಾಯಂಗೊಳಿಸುವಿಕೆ, ಹೊಸ ಹುದ್ದೆಗಳ ಸೃಷ್ಟಿಯ ಮೇಲಿನ ನಿಷೇಧ ತೆರವುಗೊಳಿಸುವ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ–ಆರೋಗ್ಯ ಕ್ಷೇತ್ರಗಳ ಖಾಸಗೀಕರಣ, ಆರ್ಥಿಕ ಅಸಮಾನತೆಗಳಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಹೇಳಿದರು.
ಮನರೆಗಾ ಯೋಜನೆಯನ್ನು ಎಬಿ–ಜಿ–ರಾಮ್ ಎಂದು ಬದಲಿಸಿ ಉದ್ಯೋಗ ಖಾತ್ರಿ ಹಕ್ಕನ್ನೇ ಕಸಿದುಕೊಂಡಿರುವುದು, ವಿದ್ಯುತ್ ಮಸೂದೆ 2025 ಮೂಲಕ ವಿದ್ಯುತ್ ಕ್ಷೇತ್ರ ಖಾಸಗೀಕರಣ, ವಿಮಾ ಕ್ಷೇತ್ರವನ್ನು ಶೇ.100 ರಷ್ಟು ವಿದೇಶಿ ಬಂಡವಾಳಕ್ಕೆ ತೆರೆದಿರುವುದು ಜನ ವಿರೋಧಿ ನೀತಿಗಳೆಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ನಿರ್ಮಾಣ, ಬೀಡಿ, ಗೃಹ, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರಿಗೆ ಕಾರ್ಮಿಕ ಸ್ಥಾನಮಾನ, ಕನಿಷ್ಠ ವೇತನ, ಪಿಎಫ್, ಇಎಸ್ಐ ಸೌಲಭ್ಯ ನೀಡದೇ ಶೋಷಣೆ ಮುಂದುವರೆದಿದೆ ಎಂದು ದೂರಿದರು.
ಈ ನೀತಿಗಳು ಯಾವುದೇ ಒಂದು ಪಕ್ಷದವಲ್ಲ, ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ವರ್ಗನೀತಿಗಳೆಂದು ಹೇಳಿದ ಅವರು, ಈ ದಾಳಿಯ ವಿರುದ್ಧ ಐಕ್ಯ ಹಾಗೂ ರಾಜಿ ರಹಿತ ಹೋರಾಟ ಅಗತ್ಯವಿದೆ ಎಂದರು. ಆದ್ದರಿಂದ ಕಾರ್ಮಿಕರ ಹಕ್ಕುಗಳು, ಸಾರ್ವಜನಿಕ ಉದ್ಯಮಗಳು ಮತ್ತು ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಉಳಿಸಲು ಫೆ.12ರ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಜೆಸಿಟಿಯು ಎಲ್ಲಾ ದುಡಿಯುವ ಜನತೆಗೆ ಕರೆ ನೀಡುತ್ತದೆ ಎಂದು ಸತ್ಯಬಾಬು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎ. ದೇವದಾಸ್, ಮಾಧವ್ ರೆಡ್ಡಿ, ಸಂಗಣಕಲ್ ಕೃಷ್ಣ, ಸೋಮಶೇಖರ್ ಗೌಡ, ಡಾ. ಪ್ರಮೋದ್, ಗೋವಿಂದ್,ಕಿರಣ್ ಕುಮಾರ್, ಶಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.


