ಮಹಾ ನಗರ ಪಾಲಿಕೆ ಸೂಪರ್ ಸೀಡ್ ಗೆ ಇಬ್ರಾಹಿಂ ಬಾಬು ಆಗ್ರಹ

Sandeep Malannavar
ಮಹಾ ನಗರ ಪಾಲಿಕೆ ಸೂಪರ್ ಸೀಡ್ ಗೆ ಇಬ್ರಾಹಿಂ ಬಾಬು ಆಗ್ರಹ
WhatsApp Group Join Now
Telegram Group Join Now
ಬಳ್ಳಾರಿ, ಫೆ.02: ಇಲ್ಲಿನ ಮಹಾನಗರ ಪಾಲಿಕೆ ಕಳೆದ 9 ತಿಂಗಳಿಂದ ಸಾಮಾನ್ಯ ಸಭೆಯನ್ನೇ ನಡೆಸಿಲ್ಲ, ತನ್ನ ಕರ್ತವ್ಯವನ್ನು ಮರೆತ ಈ ಪಾಲಿಕೆಯನ್ನು ಸರ್ಕಾರ ಕೂಡಲೇ ಸೂಪರ್ ಸೀಡ್ ಮಾಡಬೇಕು ಎಂದು ಪಾಲಿಕೆ ಸದಸ್ಯ ಸಿ.ಇಬ್ರಾಹಿಂ ಬಾಬು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ಯಾವುದೇ ಪಾಲಿಕೆ 6 ತಿಂಗಳಲ್ಲಿ ಸಾಮಾನ್ಯ ಸಭೆ ನಡೆಸದೇ ಹೋದರೆ, ಅಂತಹ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976ರ ಕಾಯ್ದೆ ಅಡಿ ಸರ್ಕಾರಕ್ಕೆ ಅಧಿಕಾರವಿದೆ. ಜನರ ಹಿತ ಮರೆತಿರುವ ಪಾಲಿಕೆಯ ಆಡಳಿತವನ್ನು ಸರ್ಕಾರ ಸೂಪರ್ ಸೀಡ್ ಮಾಡಿ, ಹೊಸ ಆಡಳಿತಕ್ಕೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು.
2025-26ರ ಬಜೆಟ್ ಮಂಡನೆ ವೇಳೆ ನಡೆದ ಸಾಮಾನ್ಯ ಸಭೆಯೇ ಕೊನೆ. ಅಲ್ಲಿಂದ ಇಲ್ಲಿಯ ವರೆಗೆ ಯಾವುದೇ ಸಾಮಾನ್ಯ ಸಭೆಗಳು ಪಾಲಿಕೆಯಲ್ಲಿ ನಡೆದಿಲ್ಲ. ಹೀಗಾಗಿ ಇದು ಕೇವಲ ಅಧಿಕಾರಿಗಳ ಆಡಳಿತವಿರುವ ಪಾಲಿಕೆಯೋ ಅಥವಾ ಚುನಾಯಿತ ಜನಪ್ರತಿನಿಧಿಗಳು ಇದ್ದಾರೋ ಇಲ್ಲವೋ ಎಂಬ ಪ್ರಶ್ನೆ ಎದುರಾಗಿದೆ.
ಸಾಮಾನ್ಯ ಸಭೆ ನಡೆಸದೇ, ನಗರದ ಸಮಸ್ಯೆಗಳ ಕುರಿತು ಚರ್ಚೆ ಮಾಡದೇ, ಪಾಲಿಕೆಯನ್ನು ಹೀಗೆ ನಡೆಸಿದರೆ ಚುನಾಯಿತ ಕಾರ್ಪೊರೇಟರ್ಗಳು ತಮ್ಮ ವಾರ್ಡ್ಗಳ ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಏನು ಉತ್ತರ ನೀಡಬೇಕು ಎಂಬುದೇ ತಿಳಿಯದಾಗಿದೆ.
ಜನರಿಗೆ ಅನುಕೂಲವಾಗಲಿ ಎಂದೇ ಸ್ಥಳೀಯ ಸಂಸ್ಥೆಗಳನ್ನು ಸಂವಿಧಾನದ ಆಶಯದಂತೆ ರಚಿಸಿದೆ. ಆದರೆ ಬಳ್ಳಾರಿಯಲ್ಲಿ ಸಂವಿಧಾನದ ಆಶಯಗಳಿಗೇ ಧಕ್ಕೆಯಾಗಿದೆ. ಚುನಾಯಿತ ಪ್ರತಿನಿಧಿಗಳಿದ್ದು, ಜನರ ಸಮಸ್ಯೆ ಚರ್ಚಿಸಲು ಒಂದು ಕಡೆ ಸಭೆ ಸೇರಿಸಲೂ ಆಗದ ಈ ಪರಿಸ್ಥಿತಿಯು ಜನ ವಿರೋಧಿ, ಅಷ್ಟೇ ಅಲ್ಲ, ಇದು ಪ್ರಜಾಪ್ರಭುತ್ವದ ಕಗ್ಗೋಲೆಯೂ ಹೌದು,
ಬಳ್ಳಾರಿ ಮಹಾನಗರ ಪಾಲಿಕೆ ಜನರ ಬಗ್ಗೆ ಇಷ್ಟು ನಿರ್ಲಕ್ಷ್ಯ ತಾಳಲು, ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.
ಬಳ್ಳಾರಿ ನಗರ ಪಾಲಿಕೆಯ ಈಗಿನ ಸ್ಥಿತಿಯನ್ನು ಗಮನಿಸುತ್ತಿದ್ದರೆ ‘ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ಬಸವಣ್ಣನರವರ ವಚನವೊಂದು ನೆನಪಾಗುತ್ತಿದೆ. ಬಳ್ಳಾರಿ ಮಹಾನಗರ ಪಾಲಿಕೆಯನ್ನು ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ.
ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದ್ದೇ ಬಳ್ಳಾರಿಯ ಕಾರಣಕ್ಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ನಗರಾಭಿವೃದ್ಧಿ ಸಚಿವರಿಗೆ ಇಲ್ಲಿನ ಪಾಲಿಕೆ ಮತ್ತು ಆಡಳಿತದ ರೀತಿ ತಿಳಿಯದೇ ಇರುವುದು ಅಚ್ಚರಿಯ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಇಲ್ಲಿನ ಆಡಳಿತಕ್ಕೆ ಚಾಟಿ ಬೀಸಿ ಸರಿದಾರಿಗೆ ತರಬೇಕು. ಇಲ್ಲವೇ ಸೂಪರ್ ಸೀಡ್ ಮಾಡಿ ಹೊಸ ಆಡಳಿತ ಬರುವಂತೆ ಮಾಡಬೇಕು ಎಂದಿದ್ದಾರೆ.
WhatsApp Group Join Now
Telegram Group Join Now
Share This Article