ಬೆಂಗಳೂರು,ಏಪ್ರಿಲ್ 11: ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
‘ನಾವು ಅವರನ್ನು ಬೆಂಬಲಿಸಿದರೆ, ನೇರವಾಗಿಯೇ ಬೆಂಬಲಿಸುತ್ತೇವೆ. ನಾವು ಗೌಪ್ಯವಾಗಿ ಏಕೆ ಬೆಂಬಲ ನೀಡಬೇಕು? ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಬಿ-ಫಾರಂ ನೀಡಿದ್ದೇವೆ. ಸ್ವಾಮೀಜಿ ಈ ಹಿಂದೆಯೇ ಈ ನಿರ್ಧಾರ ತೆಗೆದುಕೊಂಡಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ನಮ್ಮ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತ ತತ್ವಗಳ ಮೇಲೆ ಸದಾ ಶ್ರಮಿಸುತ್ತಿರುವ ಸ್ವಾಮೀಜಿಯ ಬಗ್ಗೆ ನಮಗೆ ಗೌರವವಿದೆ’ ಎಂದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿರುವ ಮೂರು ಕ್ಷೇತ್ರಗಳಲ್ಲಿಯೂ ಸೋಲು ಕಾಣಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಡಾ. ಸಿಎನ್ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದೇವೇಗೌಡರು ನಾಲ್ಕು ಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಿದರು.