ಟಾಲಿವುಡ್ ಸ್ಟಾರ್ ಕಪಲ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಒಂದಾಗಿದ್ದಾರೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಬಳಿಕ ಈ ಜೋಡಿಯ ಹೊಸ ಸಿನಿಮಾ ಘೋಷಣೆಯಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ಟೈಟಲ್ ಗ್ಲಿಂಪ್ಸ್ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ.
ರಣಬಾಲಿಯಾಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ. ವಿಜಯ್ 14ನೇ ಸಿನಿಮಾಗೆ ರಣಬಾಲಿ ಎಂಬ ಶೀರ್ಷಿಕೆ ಇಡಲಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು ಉಂಟುಮಾಡಿದ ನೋವುಗಳ ಮೇಲೆ ಬೆಳಕು ಚೆಲ್ಲುವುದಲ್ಲದೇ, ಭಾರತದ ಬೃಹತ್ ಆರ್ಥಿಕ ಶೋಷಣೆಯ ಬಗ್ಗೆಯೂ ರಣಬಾಲಿ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ.
ಸೂಪರ್ ಹಿಟ್ ಟಾಕ್ಸಿ ವಾಲಾ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯಾನ್ ರಣಬಾಲಿಗಾಗಿ ಕೈ ಜೋಡಿಸಿದ್ದಾರೆ. ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ದಿ ಮಮ್ಮಿ ಖ್ಯಾತಿಯ ಅರ್ನಾಲ್ಡ್ ಮೋಸ್ಲೂ, ಸರ್ ಥಿಯೋಡರ್ ಹೆಕ್ಟರ್ ತಾರಾ ಬಳಗದಲ್ಲಿದ್ದಾರೆ.
ಡಿಯರ್ ಕಾಮ್ರೇಡ್ ಮತ್ತು ಖುಷಿ ಸಿನಿಮಾ ಬಳಿಕ ಮೈತ್ರಿ ಮೂವೀ ಮೇಕರ್ಸ್ ವಿಜಯ್ ದೇವರಕೊಂಡ ‘ರಣಬಾಲಿಗೆ’ ಹಣ ಹಾಕುತ್ತಿದೆ. ಈ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸಿದ್ದು, ಟಿ-ಸೀರೀಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 11ರಂದು ‘ರಣಬಾಲಿ’ ಸಿನಿಮಾ ಬಿಡುಗಡೆಯಾಗಲಿದೆ.


