ಕನ್ನಡ, ತುಳು ಸಿನಿರಸಿಕರ ಮನಗೆದ್ದ ಅಪ್ಪೆ ಟೀಚರ್, ಲವ್ ಕಾಕ್ಟೇಲ್, ಮಾಲ್ಗುಡಿ ಡೇಸ್ ಚಿತ್ರದ ಯಶಸ್ಸಿನ ನಂತರ, ಇದೀಗ ಮತ್ತೊಂದು ವಿಭಿನ್ನ ಹಾಗೂ ಮನೋರಂಜನೆಯ ‘ಹೌದ್ದೋ ಹುಲಿಯ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದೆ ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಅಂಡ್ ಪ್ರೊಡಕ್ಷನ್ಸ್.
ಪಕ್ಕಾ ಉತ್ತರ ಕರ್ನಾಟಕ ಭಾಷೆಯ ಸೊಗಡಿರುವ ಹೊಸ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ ಇಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಚಿತ್ರಮಂದಿರ ಮತ್ತು ಟಾಕೀಸ್ ಆ್ಯಪ್ ಒಟಿಟಿಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಟೈಟಲ್ ಸ್ಪಾನ್ಸರ್ ಆಗಿ ಹೆಸರಾಂತ ಅಮೃತ್ ನೋನಿ ಮತ್ತು ಐಸ್ ಕ್ರೀಮ್ ಪಾರ್ಟರ್ ಆಗಿ ಹ್ಯಾಂಗ್ಯೊ ಐಸ್ ಕ್ರೀಮ್ ಜೊತೆಯಾಗಿದ್ದಾರೆ.
ಗ್ರಾಮೀಣ ಬದುಕಿನ ಸೊಗಡು, ಹಾಸ್ಯ, ಭಾವನೆ ಮತ್ತು ಸಮಾಜದ ನೈಜ ಮುಖವನ್ನು ಒಳಗೊಂಡ ಕಥಾವಸ್ತುವನ್ನು ಹೊಂದಿರುವ ಚಿತ್ರ/ಸಂಪೂರ್ಣ ಜವಾರಿ ಭಾಷೆಯಲ್ಲಿ ಮೂಡಿ ಬಂದಿದ್ದು ತಂಡ ಯುವ ಮತ್ತು ಅನುಭವಿ ಕಲಾವಿದರನ್ನ ಒಳಗೊಂಡಿದೆ.
ಕೆ.ರತ್ನಾಕರ ಕಾಮತ್ ಮತ್ತು ಗಣೇಶ್ ಆರ್ ಕಾಮತ್ ಕೆ ನಿರ್ಮಾಣದಲ್ಲಿ, ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು
‘ದಸ್ಕತ್’ ಸಿನಿಮಾ ನಿರ್ದೇಶಿಸಿದ ಯುವ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಸಂತೋಷ್ ಗುಂಪಲಾಜೆ ಮತ್ತು ದೀಕ್ಷಿತ್ ಧರ್ಮಸ್ಥಳ ಛಾಯಗ್ರಹಣವಿದ್ದು, ಚಿತ್ರಕ್ಕೆ ಕಿಶೋರ್ ಶೆಟ್ಟಿ, ಸಮರ್ಥನ್ ರಾವ್ ಸಂಗೀತವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಡಿ ಗೌಡ ಮತ್ತು ಕ್ರಿಯೇಟಿವ್ ಹೆಡ್ ಆಗಿ ಸ್ಮಿತೇಶ್ ಎಸ್ ಬಾರ್ಯ ಕೆಲಸ ಮಾಡಿದ್ದು ತಂಡದಲ್ಲಿ ಚಿದಾನಂದ ಪೈ, ನಿಶಿತ್ ಶೆಟ್ಟಿ, ಮನೋಜ್ ಆನಂದ್, ನೀರಜ್ ಕುಂಜರ್ಪ ಮತ್ತು ಅನೂಪ್ ಭಟ್ ಸಹಕರಿಸಿದ್ದಾರೆ.
ಹಿರಿಯ ಕಲಾವಿದರಾದ ವೈಜಾನಾಥ್ ಬಿರಾದರ್, ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಸೂರಜ್,ಮಲ್ಯ ಬಾಗಲಕೋಟೆ, ಸಂತೋಷ್ ರೋಣ,ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ, ಉಮೇಶ್ ಕಿನ್ನಾಳ್ ದಾನಪ್ಪ, ಸದಾನಂದ ಹೀಗೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದು ,ದೃಶ್ಯ ವೈಭವ, ನೈಜ ಸಂಭಾಷಣೆಗಳು ಪ್ರೇಕ್ಷಕರನ್ನು ತಮ್ಮದೇ ಲೋಕಕ್ಕೆ ಕರೆದುಕೊಂಡು ಹೋಗಲಿವೆ. ಕಥೆಯ ಹರಿವು ಎಲ್ಲ ವರ್ಗದ ಪ್ರೇಕ್ಷಕರಿಗೂ ಸಂಪರ್ಕ ಸಾಧಿಸುವಂತೆ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಸಂಪೂರ್ಣ ಮನರಂಜನಾ ಚಿತ್ರವಾಗಿದ್ದು ಈಗಾಗಲೇ ಚಿತ್ರದ ಜ್ವಾಲಿ ಸಾಂಗ್ ಲಚ್ಚಿ ಲಚ್ಚಿ ಟಾಕೀಸ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಮತ್ತು ಸೋಷಿಯಲ್ ಮೀಡಿಯದಲ್ಲು ವೈರಲ್ ಆಗಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಸಫಲವಾಗಿದೆ.
————————-
ಕೌಟುಂಬಿಕ ಚಿತ್ರ ವಲವಾರ
ದಕ್ಷಿಣ ಭಾರತ ಚಿತ್ರರಂಗದಲ್ಲೀಗ ನೆಲ ಮೂಲದ ಕಥೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಅದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ‘ವಲವಾರ’. ಟೈಟಲ್ ಹಾಗೂ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ಈ ಚಿತ್ರ ಇಂದು ಬಿಡುಗಡೆಯಾಗಿದೆ.
ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ‘ವಲವಾರ’ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಗೌರ ಎನ್ನುವ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ.
‘ವಲವಾರ’ ಸಿನಿಮಾದ ಟ್ರೇಲರ್ ನ ಡಿಜಿಟಲ್ ಲಾಂಚ್ ಮಾಡಿ ಶುಭ ಕೋರಿದ್ದ ಶಿವಣ್ಣ, ಚಿತ್ರ ನೋಡಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರ ತಂಡಕ್ಕೆ ಹೊಸ ಹುರುಪು ನೀಡಿದೆ.
ಮಾರ್ಫ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿರುವ ‘ವಲವಾರ’ ಚಿತ್ರಕ್ಕೆ ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಸಂಗೀತ, ಪ್ರಮೋದ್ ಮರವಂತೆ ಸಾಹಿತ್ಯ ಬಾಲರಾಜ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಎಸ್.ಹೆಚ್ ಸಂಕಲನ, ವಿ.ಜಿ. ರಾಜನ್ ಅವರ ಶಬ್ಧ ವಿನ್ಯಾಸವಿದೆ. ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ.
ಮಾ.ವೇದಿಕ್ ಕೌಶಲ್, ಮಾ.ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಪಾತ್ರದಲ್ಲಿ ನೈಜವಾಗಿ ನಟಿಸಿದ್ದಾರೆ.
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚೌಕಿದಾರ್
ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ‘ಚೌಕಿದಾರ್’ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವಣ್ಣ “ಒಳ್ಳೆ ವ್ಯಕ್ತಿಗೆ ಒಳ್ಳೆಯದು ಆಗಬೇಕು ಎಂಬುವುದು ನಮ್ಮ ಭಾವನೆ. ಈ ಸಿನಿಮಾ ನೀಟ್ ಆಗಿ ಹೋಗಲಿ. ನಿಮ್ಮಂತ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು. ಇನ್ನೂ ಹೆಚ್ಚಿನ ನಮ್ಮದೇ ಸಿನಿಮಾ ಮಾಡಿ. ಚಂದ್ರಶೇಖರ್ ಬಂಡಿಯಪ್ಪ ತುಂಬಾ ಒಳ್ಳೆ ಡೈರೆಕ್ಟರ್. ಎಮೋಷನ್ ತುಂಬಾ ಚೆನ್ನಾಗಿ ತೋರಿಸ್ತಾರೆ. ಸಾಯಿ ಕುಮಾರ್ ನಾನು ಮುದ್ದಿನ ಕಣ್ಮಣಿಯಿಂದ ಸ್ನೇಹಿತರು. ಬ್ರದರ್ಸ್ ಅಂದರೆ ತಪ್ಪಾಗಲ್ಲ. ಈ ಚಿತ್ರದಲ್ಲಿ ಪೃಥ್ವಿ ಗೆಟಪ್ ಚೆನ್ನಾಗಿದೆ. ಧನ್ಯಾ ಚಿಕ್ಕ ಮಗುವಿನಿಂದ ನೋಡಿಕೊಂಡು ಬಂದಿದ್ದೇವೆ. ಈಗ ಅವಳು ವಿಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಸಚಿನ್ ಸಂಗೀತ ಚೆನ್ನಾಗಿ ಮಾಡಿದ್ದಾರೆ. ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿದೆ “ಎಂದು ಶುಭ ಹಾರೈಸಿದ್ದಾರೆ.
ಪೃಥ್ವಿ ಅಂಬಾರ್ ನಾಯಕರಾಗಿ, ನಾಯಕಿಯಾಗಿ ಧನ್ಯಾ ಸಾಥ್ ಕೊಟ್ಟಿದ್ದಾರೆ. ಸಾಯಿ ಕುಮಾರ್ ಇಲ್ಲಿ ವಿಶೇಷ ಪಾತ್ರದಲ್ಲಿ, ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಚೌಕಿದಾರ್ ಚಿತ್ರದಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಕಥೆಯನ್ನು ಹೇಳಲಾಗಿದೆ. ಫ್ಯಾಮಿಲಿ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ. ವಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನವಿದೆ.
ರಕ್ತ ಕಾಶ್ಮೀರ
ಎಂಡಿಎಂ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯ ಮುಖ್ಯಪಾತ್ರದಲ್ಲಿ ನಟಿಸಿರುವ ‘ರಕ್ತ ಕಾಶ್ಮೀರ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರ ಹೊಂದಿದೆ. ಪಾಕ್ ಆಕ್ರಮಿತ ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲ. ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಅಮಾಯಕರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಹಾಗೂ ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಸನ್ನಿವೇವನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.
“ದೇಶಪ್ರೇಮ ಸಾರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬೇಕು. ಇನ್ನೂ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹದಿನೆಂಟು ನಿಮಿಷಗಳ ಒಂದು ವಿಶೇಷ ಗೀತೆ ಇದೆ. ಈ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಅಭಿನಯಿಸಿದ್ದಾರೆ. ಇದು ಈವರೆಗೂ ಯಾರು ಮಾಡಿರದ ದಾಖಲೆ” ಎನ್ನುತ್ತಾರೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು. ಅವರೇ ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ರಮ್ಯ, ಮುಖೇಶ್ ರಿಶಿ, ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ(ತೆಲುಗು ನಟಿ), ಕುರಿ ಪ್ರತಾಪ್ ಮುಂತಾದವರಿದ್ದಾರೆ.


