ಗೋಕಾಕ: ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಆಟ ಪಾಠಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮ ವಹಿಸಬೇಕೆಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಶುರಾಮ ಘಸ್ತಿ ಅವರು ಸಲಹೆ ನೀಡಿದರು.
ತಾಲೂಕಿನ ಮಿಡಕನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಏಳಪಟ್ಟಿ , ಮಿಡಕನಟ್ಟಿ ಹಾಗೂ ಕೇಸಪ್ಪನಟ್ಟಿ ಗ್ರಾಮಗಳಲ್ಲಿ ಸೇರಿದ ಶಾಲಾ ಮಕ್ಕಳ ಗ್ರಾಮ ಸಭೆಯ ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಿ.ಎಸ್ . ಕೂ ಡವಕ್ಕಲಿಗ ಅವರು ಮಾತನಾಡಿ, ಗುರು ಜ್ಞಾನ ನೀಡಿದರೆ ಹೆತ್ತವರು ಸಂಸ್ಕಾರ ನೀಡುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಹೆತ್ತವರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ಹೇಳಿದರು.

ಮಿಡಕನಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ದೊಡಮನಿ ಅವರು
ಶಾಲಾ ಮಕ್ಕಳ ಗ್ರಾಮಸಭೆಯ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಮಸ್ಯೆಗಳನ್ನು ಮಕ್ಕಳಿಂದಲೇ ತಿಳಿದುಕೊಳ್ಳುವುದು.ಮಕ್ಕಳಿಗೆ ಮೀಸಲಾದ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು. ಮಕ್ಕಳು ಸಂಘಟಿತರಾಗಿ ತಮಗಿರುವ ಎಲ್ಲಾ ಹಕ್ಕುಗಳನ್ನು ಬಳಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು.ಮಕ್ಕಳು ತಮ್ಮ ಸಮಸ್ಯೆಗಳನ್ನು, ಆಲೋಚನೆಗಳನ್ನು, ಅಭಿಪ್ರಾಯಗಳನ್ನು ಗ್ರಾಮ ಪಂಚಾಯ್ತಿಯ ಹಿರಿಯರೊಂದಿಗೆ ಹಂಚಿಕೊಳ್ಳಲು ಹಾಗೂ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಡುವುದು.ತಮ್ಮ ಸುತ್ತಮುತ್ತಲ ಮಕ್ಕಳ ಮೇಲೆ ನಡೆಯುವ ಅನ್ಯಾಯ, ಅಕ್ರಮಗಳನ್ನು ಗುರುತಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಕಲ್ಪಿಸುವುದು. ಭವಿಷ್ಯದಲ್ಲಿ ವಯಸ್ಕರಾದಾಗ ಗ್ರಾಮಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಪೂರ್ವ ತಯಾರಿ ನೀಡುವುದು. ಹೀಗೆ ಹತ್ತು ಹಲವಾರು ವಿಷಯಗಳನೋ ಳಗೊಂಡು ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಪ್ರತಿ ಗ್ರಾಮಗಳಲ್ಲಿಯೂ ಶಾಲಾ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಲಾಗಿದೆ. ಈ ಮಹತ್ವದ ಸಭೆಯ ಲಾಭವನ್ನು ಶಾಲಾ ಮಕ್ಕಳು ಹಾಗೂ ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ ಚಿಂಚಿ ಅವರು ಮಾತನಾಡಿ, ಸರ್ಕಾರದ ಎಲ್ಲಾ ಪ್ರಗತಿಪರ ಯೋಜನೆಗಳನ್ನು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳ ಜನರಿಗೆ ತಲುಪಿಸಲು ಮಿಡಕ್ಕನಟ್ಟಿ ಗ್ರಾಮ ಪಂಚಾಯಿತಿಯು ಬದ್ಧವಾಗಿದೆ . ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಗೊಳ್ಳುವ ಗ್ರಾಮ ಅಭಿವೃದ್ಧಿ ಕಾರ್ಯಗಳಿಗೆ ನಮ್ಮೆಲ್ಲರ ಬೆಂಬಲ ಸದಾ ಇದೆ ಎಂದು ಹೇಳಿದರು.
ಗ್ರಾಮ ಸಭೆಯ ಪೂರ್ವದಲ್ಲಿ ಸರ್ಕಾರದ ಸುತ್ತೋಲೆಯ ಪ್ರಕಾರ ಮೂರು ಗ್ರಾಮಗಳಲ್ಲಿ ನಿರಂತರ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಜರುಗಿಸಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ದೇಮಶೆಟ್ಟಿ ಅವರು ವೈಜ್ಞಾನಿಕವಾಗಿ ಪವಾಡ ಬಯಲು ಕಾರ್ಯಕ್ರಮವನ್ನು ಪ್ರದರ್ಶನ ಮಾಡಿದರು.
ಶಾಲಾ ಮಕ್ಕಳ ಗ್ರಾಮ ಸಭೆಯ ಕಾರ್ಯಕ್ರಮದಲ್ಲಿ ಗ್ರಾಮಗಳ ಮುಖಂಡರಾದ ಶ್ರೀಮತಿ ಸಂಕಣ್ಣವರ,ತೋರಣಗಟ್ಟಿ, ರಾಮಣ್ಣ ಪೂಜಾರಿ ,ಪಾಂಡು ಚಿಂಚಿ, ಸಿದ್ದನ ಕೋಮಣ್ಣವರ, ಬಿ ಆರ್ ಪಿ ಶ್ರೀಮತಿ ಶೈಲಾ ಚವಲಗಿ, ಸಿಆರ್ ಪಿ ನಾಗೇಶ ತಳವಾರ, ಗ್ರಾಮ ಆಡಳಿತ ಅಧಿಕಾರಿ ಬಾರಿಮರದ, ಡಿ. ಬಿ. ಉಜ್ಜನಕೊಪ್ಪ, ಶ್ರೀ ನಾಯಕ,ಶ್ರೀ ಕೆಸರನಟ್ಟಿ, ಸುಭಾಷ ಕೌಜಲಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಸಿ ಆರ್ ಪಿ ನಾಗೇಶ ತಳವಾರ ಸರ್ವರನ್ನು ಸ್ವಾಗತಿಸಿದರು.
ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ದೊಡಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.


