ಮತದಾರರ ಮೇಲಿನ ಕೋಪಕ್ಕೆ ಡಿಕೆ ಸಹೋದರರ ಗೂಂಡಾಗಿರಿ: ಆರ್ ಅಶೋಕ ವಾಗ್ದಾಳಿ

Ravi Talawar
ಮತದಾರರ ಮೇಲಿನ ಕೋಪಕ್ಕೆ ಡಿಕೆ ಸಹೋದರರ ಗೂಂಡಾಗಿರಿ: ಆರ್ ಅಶೋಕ ವಾಗ್ದಾಳಿ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್  ಪರ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಲಿನ ಸುಳಿವು ದೊರೆತಿರುವ ಹತಾಶೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಅಶೋಕ್, ಡಿಕೆ ಸಹೋದರರು ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ಟೀಕಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ CM-in-waiting ಆಗಿ ಉಳಿಯಬೇಕಾಗುತ್ತದಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ.

ಬಿಜೆಪಿ ಕಾರ್ಯಕರ್ತ‌ ಸಹೋದರ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರದ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ’ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ಕೆಡಿಸಿ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಈ ದುಷ್ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕೈಗೊಂಡು ನಿಷ್ಪಕ್ಷಪಾತವಾಗಿ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ, ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article