ಬಳ್ಳಾರಿ, ಜ.24 : ರೀಲ್ಸ್ ಹಾಗೂ ಫೋಟೊ ಶೂಟ್ ಮಾಡುವ ಉದ್ದೇಶದಿಂದ ಖಾಲಿ ಬಿದ್ದಿದ್ದ ಮಾದರಿ ಮನೆಯೊಂದಕ್ಕೆ ನುಗ್ಗಿದ ಯುವಕರ ನಿರ್ಲಕ್ಷ್ಯದಿಂದ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರಿಗೆ ಸೇರಿದ್ದ ಜಿ ಸ್ಕ್ವೇರ್ ಲೇಔಟ್‌ನಲ್ಲಿನ ಮಾದರಿ ಮನೆ ಬೆಂಕಿಗೆ ಆಹುತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕರಾಗಿದ್ದಾರೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಪಿ ಪನ್ನೇಕರ್, ಈ ಮನೆ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಇಲ್ಲಿ ಯಾರೂ ವಾಸವಿಲ್ಲ. ಸಿಸಿಟಿವಿ ಕ್ಯಾಮೆರಾ ಅಥವಾ ಭದ್ರತಾ ಸಿಬ್ಬಂದಿಯ ವ್ಯವಸ್ಥೆಯೂ ಇಲ್ಲ. ಈ ಪರಿಸ್ಥಿತಿಯನ್ನೇ ದುರುಪಯೋಗ ಮಾಡಿಕೊಂಡು ಯುವಕರು ರೀಲ್ಸ್ ಹಾಗೂ ಫೋಟೊ ಶೂಟ್ ಮಾಡಲು ಇಲ್ಲಿ ಬರುತ್ತಿದ್ದದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದರು.
ಮನೆಯೊಳಗೆ ಕಸ, ಪುಡಿಯಾದ ಗಾಜುಗಳು ಹಾಗೂ ಧೂಮಪಾನಕ್ಕೆ ಬಳಸಿದ ವಸ್ತುಗಳು ಪತ್ತೆಯಾಗಿವೆ. ಗುಂಪಿನಲ್ಲಿದ್ದ ಬಾಲಕನೊಬ್ಬ ಸಿಗರೇಟ್ ಅಥವಾ ಇತರ ವಸ್ತುಗಳಿಂದ ಬೆಂಕಿ ಹೊತ್ತಿಸಿದ್ದು, ಅದು ನಿಯಂತ್ರಣ ತಪ್ಪಿ ಇಡೀ ಮನೆಗೆ ವ್ಯಾಪಿಸಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ವಶಕ್ಕೆ ಪಡೆದವರ ಮೊಬೈಲ್‌ಗಳ ಪರಿಶೀಲನೆಯಲ್ಲಿಯೂ ಈ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಮಾಹಿತಿ ಲಭ್ಯವಾಗಿದೆ.
ಬಂಧಿತರ ಪೈಕಿ ಕೆಲವರು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕೆಲವರು ಶಾಲೆ ಬಿಟ್ಟವರಾಗಿದ್ದಾರೆ. ಉಳಿದವರು ಕೂಲಿ ಕಾರ್ಮಿಕರು ಹಾಗೂ ಚಾಲಕರ ಮಕ್ಕಳಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ಯಾವುದೇ ರಾಜಕೀಯ ಅಥವಾ ಪೂರ್ವಯೋಜಿತ ಉದ್ದೇಶ ಕಂಡುಬಂದಿಲ್ಲವಾದರೂ, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಹಂತದ ತನಿಖೆ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ತಾಂತ್ರಿಕ ಹಾಗೂ ವಿಧಿವಿಜ್ಞಾನ (ಎಫ್‌ಎಲ್‌ಎಸ್) ತಂಡದಿಂದ ಸಾಕ್ಷ್ಯ ಸಂಗ್ರಹ ಕಾರ್ಯ ಆರಂಭಿಸಲಾಗಿದೆ.
ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಗ್ರಾಮೀಣ ಠಾಣೆಗೆ ಘಟನೆ ಕುರಿತು ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಅಲ್ಲದೆ, ನಗರದ ಹೊರವಲಯದ ಖಾಲಿ ಲೇಔಟ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ರಾತ್ರಿ ಗಸ್ತು ಹಾಗೂ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು, ಎಂದು ಎಸ್‌ಪಿ ತಿಳಿಸಿದ್ದಾರೆ.


