ಬಳ್ಳಾರಿ. ಜ. 23. : ನಗರದಲ್ಲಿ ಜನರು ತಮ್ಮ ವಾಹನಗಳನ್ನು ನೆಮ್ಮದಿಯಾಗಿ ಚಲಾಯಿಸಬೇಕಾದರೆ ಉತ್ತಮ ರಸ್ತೆ ವ್ಯವಸ್ಥೆ ಅಗತ್ಯ. ರಸ್ತೆ ವ್ಯವಸ್ಥೆಯೇ ನಗರ ಅಭಿವೃದ್ಧಿಯ ಪ್ರತಿಬಿಂಬ. ಆದರೆ ಗಣಿನಗರಿ ಬಳ್ಳಾರಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ‘ಸುವರ್ಣ ಬಳ್ಳಾರಿ’ ಎಂಬ ಘೋಷಣೆ ಕೇವಲ ಘೋಷಣೆಯಲ್ಲೇ ಸೀಮಿತವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿ. ಹೆಚ್ ಹುಲುಗಪ್ಪ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದವರು ಗುರುವಾರ ದಂದು ನಗರದ ರಾಘವ ಕಲಾಮಂದಿರ ದಿಂದ ಮಹಾನಗರ ಪಾಲಿಕೆಯ ವರೆಗೆ ಬೃಹತ್ ಪ್ರತಿಭಟನ ರ್ಯಾಲಿ ಮೂಲಕ ರಸ್ತೆಯಲ್ಲಿ ಸಸಿಯನ್ನು ಇಟ್ಟು ಘೋಷಣೆಯನ್ನು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು, ಸಂಸದರು, ಪಾಲಿಕೆ ಸದಸ್ಯರು ನಗರ ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್ ಗೋಪುರಗಳು, ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿದರೂ, ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಇನ್ನೂ ಅಪೂರ್ಣವಾಗಿವೆ. ನಗರದ ನೂರಾರು ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕನಿಷ್ಠ ಕಾಳಜಿಯೂ ತೋರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲ ಮುಗಿದು ಚಳಿಗಾಲವೂ ಕಳೆದಿದ್ದು, ಇದೀಗ ಬೇಸಿಗೆ ಕಾಲ ಆರಂಭವಾಗುತ್ತಿದ್ದರೂ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಪಾಲಿಕೆ ವ್ಯಾಪ್ತಿಯ ರಸ್ತೆಗಳಿಗೆ ಮಾತ್ರವಲ್ಲದೆ, ಪಿಡಬ್ಲ್ಯೂಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿರುವ ರಸ್ತೆಗಳಲ್ಲಿ ಕೂಡ ಇದೇ ದುಸ್ಥಿತಿ ಮುಂದುವರೆದಿದ್ದು ನಗರದ ಏರ್‌ಪೋರ್ಟ್ ರಸ್ತೆ, ಕೆ.ಸಿ. ರಸ್ತೆ, ಬ್ರಾಹ್ಮಣ ರಸ್ತೆ, ಕಾಳಮ್ಮ ರಸ್ತೆ, ಕಣೇಕಲ್ ರಸ್ತೆ, ರೂಪನಗುಡಿ ರಸ್ತೆ, ಬೆಂಗಳೂರು ರಸ್ತೆ, ತೇರು ಬೀದಿ, ರೇಡಿಯೋ ಪಾರ್ಕ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಗುಂಡಿಗಳಿಂದ ತುಂಬಿವೆ.
ರಸ್ತೆಯ ಮೇಲೆ ಸಾಗುವ ವಾಹನಗಳಿಗೆ ತೀವ್ರ ಹಾನಿಯಾಗುತ್ತಿದ್ದು, ಗುಂಡಿಗಳನ್ನು ತಪ್ಪಿಸಲು ಅತ್ತಿತ್ತ ಹೋಗುವಾಗ ಅಪಘಾತಗಳಿಗೂ ಕಾರಣವಾಗುತ್ತಿದೆ.
ಗುಂಡಿಗಳ ಕಾರಣದಿಂದ ಕಚೇರಿ, ಮನೆ, ಶಾಲೆ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಹಲವು ಪ್ರದೇಶಗಳಲ್ಲಿ ಕೇವಲ ಬೆಟ್‌ಮಿಕ್ಸ್ ಅಥವಾ ಗರಸು ಹಾಕಿ ತಾತ್ಕಾಲಿಕವಾಗಿ ಮುಚ್ಚಿರುವ ಗುಂಡಿಗಳು ಮತ್ತೆ ಕೆಲವೇ ದಿನಗಳಲ್ಲಿ ಹಳೆಯ ಸ್ಥಿತಿಗೆ ಮರಳುತ್ತಿವೆ ಎಂಬ ಆರೋಪವೂ ಕೇಳಿಬರುತಿದ್ದು
ಇತ್ತೀಚೆಗೆ ಪಾಲಿಕೆ ಸಭೆಯಲ್ಲಿ ರಸ್ತೆ ಗುಂಡಿ ಮುಚ್ಚಲು 40 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಆ ಹಣ ಬಳಕೆಯಾದ ಬಗ್ಗೆಯೂ, ಕಾಮಗಾರಿಗಳ ಪ್ರಗತಿಯ ಬಗ್ಗೆಯೂ ಸ್ಪಷ್ಟತೆ ಇಲ್ಲ. “ಹಣ ಮಂಜೂರಾಗಿದೆ ಎಂದರೆ ಸಾಕೆ ಕೆಲಸ ನಡೆಯದಿದ್ದರೆ ಜನರು ಯಾರನ್ನು ಪ್ರಶ್ನಿಸಬೇಕು ಎಂಬ ಪ್ರಶ್ನೆ ನಗರಾದ್ಯಂತ ಕೇಳಿಬರುತ್ತಿದೆ.ಜನಪ್ರತಿ ನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ತಾತ್ಕಾಲಿಕ ಪ್ಯಾಚ್‌ವರ್ಕ್ ಅಲ್ಲದೆ ಶಾಶ್ವತ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ. ಇಲ್ಲದಿದ್ದರೆ ‘ಸುವರ್ಣ ಬಳ್ಳಾರಿ’ ಗುಂಡಿಗಳ ಬಳ್ಳಾರಿ ಎಂದು ಕರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯ ನಂತರ ಮಹಾನಗರ ಪಾಲಿಕೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಹಾಗೂ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಅದ್ದಿಗೇರಿ ರಾಮಣ್ಣ, ಕರವೇ ಬಳ್ಳಾರಿ ಜಿಲ್ಲಾಧ್ಯಕ್ಷ ವಿ.ಹೆಚ್. ಹುಲುಗಪ್ಪ, ಕರವೇ ಮುಖಂಡರುಗಳಾದ ಅಸುಂಡಿ ಸೂ-ರಿ.ಮರುಗಯ್ಯ, ಅಸುಂಡಿ ಚಂದ್ರ, ‘ಮರ್ಗಾ ಪ್ರಸಾದ್, ನರಸಿಂಹ, ವೆಂಕಟೇಶ್.ರಾಮಯ್ಯ, ಈರಣ್ಣ, ರಾಮು, ಪ್ರವೀಣ್. ಕುರುಗೋಡು ಹೊನ್ನೂರ, ಹನುಮೇಶ್, ಹನುಮಂತ, ಲೋಕೇಶ್ ಪ್ರಭಾಕರ್, ಸ್ವಾಮಿ, ಧರ್ಮಣ್ಣ. ಖಾಜಾ ಸಬ್, ಶಿವು,ಗುರುಮೂರ್ತಿ, ಶಶಿಧರ್, ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಭಾಗವಹಿಸಿದ್ದರು.


