ಬಳ್ಳಾರಿ, ಜ.22: ತಾಲೂಕಿನ ಮೋಕ ಬಳಿ ಅಕ್ರಮ ಮರಳು ದಂಧೆಗೆ ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ.ಅವರ ನೇತೃತ್ವದ ತಂಡ ಕಡಿವಾಣ ಹಾಕಿದ್ದು, ಸ್ವಾಗತಾರ್ಹ. ಆದರೆ, ಇದು ನೆಪಕ್ಕೆ ಆಗಬಾರದು, ಸಂಪೂರ್ಣ ಕಡಿವಾಣ ಹಾಕಲು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳು ದಂಧೆ ಜೊತೆಗೆ ಮಟಕ, ಜೂಜು, ಇಸ್ಪೀಟ್, ಡ್ರಗ್ಸ್ ದಂಧೆ, ಗಾಂಜಾ ಸೇರಿದಂತೆ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಸಾಮಾನ್ಯವಾಗಿದೆ, ಇವೆಲ್ಲವುಗಳನ್ನು ಕಡಿವಾಣ ಹಾಕಿ ಇತರರಿಗೆ ಅಧಿಕಾರಿಗಳು ಮಾದರಿಯಬೇಕು. ನೂತನ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಹಾಗೂ ಬಳ್ಳಾರಿ ವಲಯದ ನೂತನ ಐಜಿಪಿ ಡಾ.ಹರ್ಷ ಅವರು ಅಧಿಕಾರ ಸ್ವೀಕರಿಸಿದ್ದು, ಬಳ್ಳಾರಿ ನಗರ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ವಿಶ್ವಾಸವಿದೆ. ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು, ಬಳ್ಳಾರಿ ಅಕ್ರಮ ದoಧೆಗಳಿಂದ ಮುಕ್ತವಾಗಬೇಕು ಎಂಬುದು ನಮ್ಮ ಕಳಕಳಿ. ಹಗರಿ ನದಿ ಸೇರಿದಂತೆ ನಾನಾ ಕಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. 1 ಗಾಡಿಗೆ ಪರವಾನಿಗೆ ಪಡೆದು ಮೂರ್ನಾಲ್ಕು ಗಾಡಿಗಳ ಮೂಲಕ ಅಕ್ರಮ ಮರಳು ಸಾಗಣೆ ನಡೆಯುತ್ತಿರುವ ಉದಾಹರಣೆಗಳಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಇದರ ಜೊತೆಗೆ ನಿಗದಿಗಿಂತ ಹೆಚ್ಚು ಭಾರ ಹಾಕಿ ಲಾರಿಗಳಲ್ಲಿ ಸಾಗಣೆ ಮಾಡುವದಿರಿಂದ ರಸ್ತೆಗಳು ಹದಗೆಟ್ಟು ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ, ಈ ಹಿಂದೆ ಅಕ್ರಮ ಅಕ್ಕಿ ದಂಧೆಕೋರರ ಮಧ್ಯೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಉದಾಹರಣೆ ಇದ್ದರು ಅಧಿಕಾರಿಗಳು ಕಡಿವಾಣಕ್ಕೆ ಮುಂದಾಗಿಲ್ಲ.
ಸಂಡೂರು ತಾಲೂಕಿನ ಎನ್ ಎಂ ಡಿಸಿ ಒಡೆತನದ ಕುಮಾರಸ್ವಾಮಿ ಗಣಿ ಗುತ್ತಿಗೆ ಪ್ರದೇಶದಿಂದ ಅಕ್ರಮವಾಗಿ ನೆರೆಯ ನೇಮ್ ಕಲ್ ಸೇರಿದಂತೆ ನಾನಾ ಕಡೆ ನಮ್ಮ ಗಣಿ ಸಂಪತ್ತನ್ನು ಸಾಗಣೆ ಮಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕಿದ್ದರು ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು, ಪೋಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


