ವಿಕಸಿತ ಭಾರತ ಯುವನಾಯಕರ ಸಂವಾದದಲ್ಲಿ ವಿಚಾರ ಮಂಡಿಸಿದ ಶುಭಂ ಡಂಗಿ
ಬಾಗಲಕೋಟೆ- ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಎಮ್.ಬಿ.ಬಿ.ಎಸ್ ತೃತೀಯ ವರ್ಷದ ವಿದ್ಯಾರ್ಥಿ ಶುಭಂ ಡಂಗಿ ಅವರು ’ವಿಕಸಿತ ಭಾರತ ಯುವನಾಯಕರ ಸಂವಾದ-೨೦೨೬’ ಕಾರ್ಯಕ್ರಮದಲ್ಲಿ ತಮ್ಮ ವಿಚಾರ ಮಂಡಿಸಿ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿರುವರು. ಜನೆವರಿ ತಿಂಗಳಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ’ವಿಕಸಿತ ಭಾರತ ಯುವನಾಯಕರ ಸಂವಾದ-೨೦೨೬’ ಕಾರ್ಯಕ್ರಮದಲ್ಲಿ ವಿಕಸಿತ ಭಾರತಕ್ಕಾಗಿ ಭವಿಷ್ಯದ ಕಾರ್ಯಯೋಜನೆ ವಿಷಯದ ಕುರಿತು ತಮ್ಮ ವಿಚಾರ ಮಂಡಿಸಿದರು. ದೇಶದ ಪ್ರಧಾನ ಮಂತ್ರಿಗಳೊಂದಿಗೆ ಯುವನಾಯಕರು ತಮ್ಮ ಆಲೋಚನೆಗಳನ್ನು ನೇರವಾಗಿ ಹಂಚಿಕೊಳ್ಳುವ ವಿಶಿಷ್ಟ ವೇದಿಕೆ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಮನ್ಸುಖ್ ಮಾಂಡವಿಯಾ, ರಕ್ಷಾ ಖಡ್ಸೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಉಪಸ್ಥಿತರಿದ್ದರು.
ಪ್ರತಿವರ್ಷ ದೇಶದ ವಿವಿಧ ರಾಜ್ಯಗಳಿಂದ ಯುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ’ವಿಕಸಿತ ಭಾರತ ಯುವನಾಯಕರ ಸಂವಾದ’ದಲ್ಲಿ ವಿವಿಧ ವಿಷಯಗಳ ಕುರಿತು ತಮ್ಮ ವಿಚಾರಗಳನ್ನು ಮಡಿಸಲು ಅವಕಾಶ ನೀಡಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ರಾಜ್ಯಮಟ್ಟದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸ್ವಯಂ ಸೇವಾ ಘಟಕ ಹಾಗೂ ಯುವ ಸಬಲೀಕರಣ ಇಲಾಖೆ ಇವುಗಳ ಸಹಯೋಗದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಕರ್ನಾಟಕದಿಂದ ಒಟ್ಟು ೪೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯ ಸಂದರ್ಭ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ಶುಭಂ ಡಂಗಿ ಎಲ್ಲ ಮೂರು ಸುತ್ತುಗಳಲ್ಲಿ ವಿಜೇತರಾಗಿ ’ಸಂವಾದ-೨೦೨೬’ರಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದರು. ಕರ್ನಾಟಕದಿಂದ ಆಯ್ಕೆಯಾದ ೪೫ ವಿದ್ಯಾರ್ಥಿಗಳಲ್ಲಿ ಇವರೊಬ್ಬರೆ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ವಿಶೇಷವಾಗಿತ್ತು.
ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸತತ ಎರಡನೇ ವರ್ಷ ’ವಿಕಸಿತ ಭಾರತ ಯುವನಾಯಕರ ಸಂವಾದ’ದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ತಮ್ಮ ವಿಚಾರ ಮಂಡಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿ ಶುಭಂ ಡಂಗಿ ಅವರನ್ನು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಹಾಗೂ ಎಲ್ಲ ವಿಭಾಗಗಳ ವೈದ್ಯರು ಮತ್ತು ಸಿಬ್ಬಂದಿ ಅಭಿನಂದಿಸಿರುವರು. ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಪಕರಾದ ಡಾ.ಉಮೇಶ ರಾಮದುರ್ಗ ಮತ್ತು ಡಾ.ಶ್ರೀನಿವಾಸ ಪಾಟೀಲ ಈ ಸಂದರ್ಭ ಉಪಸ್ಥಿತರಿದ್ದರು.
—೦೦೦—


