ಮೂಡಲಗಿ : ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುವಲ್ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತಿದ್ದು, ಅದರಲ್ಲಿ ಪಾಸಾದರೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮಂಗಳವಾರದಂದು ತಾಲೂಕಿನ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ನೂತನ ಕಟ್ಟಡ ಮತ್ತು ಚಾಲನಾ ಪಥವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಹನ ಸವಾರರ ಬಹು ದಿನಗಳ ಬೇಡಿಕೆಯಾಗಿದ್ದ ಸಹಾಯಕ ಸಾರಿಗೆ ಪ್ರಾದೇಶಿಕ ಕಚೇರಿ ಹಾಗೂ ಚಾಲನಾ ಪಥ ನಿರ್ಮಾಣವಾಗಿದ್ದು, ಇದರ ಹಿಂದಿರುವ ಜಾರಕಿಹೊಳಿ ಸಹೋದರರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಒಟ್ಟು ೪೫ ಆರ್‌ಟಿಓ ಕಚೇರಿ ಹಾಗೂ ಚಾಲನಾ ಪಥಗಳಿದ್ದು, ಇದರಲ್ಲಿ ೧೦ ಪ್ರಾರಂಭವಾಗಿವೆ. ಉಳಿದಿರುವ ೩೫ರ ಕಾಮಗಾರಿ ಸಮೀಪದಲ್ಲೇ ಪೂರ್ಣಗೊಂಡು ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಎಂದರು.
ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಚಾಲನಾ ಪಥ ಒಂದೇ ಕಡೆ ಲಭ್ಯವಿರುವಂತೆ ನಿರ್ಮಿಸಲಾಗಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸುಮಾರು ೯ ಎಕರೆ ಜಮೀನಿನಲ್ಲಿ ?೧೦ ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣವಾಗಿದ್ದು, ಒಂದೇ ಕಡೆ ಚಾಲನಾ ಪಥ ಮತ್ತು ಕಚೇರಿ ಬೆಳಗಾವಿ ಜಿಲ್ಲೆಯಲ್ಲೇ ಎಲ್ಲಿಯೂ ಇಲ್ಲ. ನಮ್ಮ ಕ್ಷೇತ್ರದಲ್ಲಿ ಎರಡೂ ಒಂದೇ ಕಡೆ ನಿರ್ಮಾಣವಾಗಿರುವುದಕ್ಕೆ ಸಂತಸ ತಂದಿದೆ ಎಂದ ಶಾಸಕರು, ಸಹಕಾರ ನೀಡಿದ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಮೊದಲು ಗ್ರಾಮ ಪಂಚಾಯತಿಗೆ ಸೀಮಿತವಾಗಿದ್ದ ಅರಭಾವಿ ಇಂದು ಪಟ್ಟಣ ಪಂಚಾಯತಿ ಆಗಿದೆ. ಕಾಲೇಜು, ಮೊರಾರ್ಜಿ ದೇಸಾಯಿ ಶಾಲೆ, ಎಆರ್‌ಟಿಓ ಕಚೇರಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅರಭಾವಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಣುಕಾ ಮಾದರ, ಧಾರವಾಡ ಅಪರ್ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ್ ಕುಲಕರ್ಣಿ, ಹುಬ್ಬಳ್ಳಿ ಮುಖ್ಯ ಕಾಮಗಾರಿ ಅಭಿಯಂತರ ಸೋಮಣ್ಣ ಅಂಗಡಿ, ಪ್ರಭಾ ಶುಗರ್ಸ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿಲಕುಂದಿ, ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಮುತ್ತೆಪ್ಪ ಜಲ್ಲಿ, ರೈತ ಮುಖಂಡ ಗಣಪತಿ ಇಳಿಗೇರ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ರಮೇಶ ಸಂಪಗಾಂವಿ, ರಮೇಶ ಮಾದರ, ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


