• ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಜಿ ಪುಣ್ಯಸ್ಮರಣೆ
• ಮಹಾಮಹಿಮರ ಸ್ಮರಣೆ ಆದರ್ಶ ಪಾಲನೆಗೆ ಸೋಪಾನ: ಈಶ್ವರ ಖಂಡ್ರೆ
ಡಾ.ಶಿವಕುಮಾರಸ್ವಾಮೀಜಿ ಜಗತ್ತಿಗೇ ಗುರುವಾಗಿದ್ದರು:ಈಶ್ವರ ಖಂಡ್ರೆ
ಬೆಂಗಳೂರು, ಜ.21: ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರು ಈ ನಾಡಿಗೆ ಮಾತ್ರವಲ್ಲ ಇಡೀ ಜಗತ್ತಿಗೇ ಗುರುವಾಗಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಮಹಾಸಭಾದಲ್ಲಿಂದು ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ 7ನೇ ಪುಣ್ಯಸ್ಮರಣೆ ಅಂಗವಾಗಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಿದ್ದಗಂಗಾಮಠದ ಪೀಠಾಧ್ಯಕ್ಷರಾಗಿದ್ದ ಅವರು ಆಶ್ರಯ, ಅನ್ನ, ಅಕ್ಷರ ಎಂಬ ತ್ರಿವಿಧ ದಾಸೋಹದಿಂದ ಎಲ್ಲ, ಜಾತಿ, ಧರ್ಮ, ಜನಾಂಗದ ಬಡವರ ಪಾಲಿಗೆ ಕಾಮಧೇನು, ಕಲ್ಪವೃಕ್ಷವಾಗಿದ್ದರು ಎಂದರು.
ಹಾನಗಲ್ ಕುಮಾರೇಶ್ವರರು 122 ವರ್ಷಗಳ ಹಿಂದೆ ಸ್ಥಾಪಿಸಿದ ವೀರಶೈವ ಮಹಾಸಭಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಸ್ವಾಮೀಜಿ ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ ನಾವೆಲ್ಲರೂ ಒಂದೆ, ಪರಶಿವನೇ ನಮ್ಮೆಲ್ಲರ ತಂದೆ ಎಂದು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.
ಶತಾಯುಷಿಗಳಾಗಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರು ಧಾರ್ಮಿಕ ಕೇಂದ್ರವಾಗಿದ್ದ ಸಿದ್ದಗಂಗೆಯನ್ನು ಸರಸ್ವತಿಯ ನೆಲೆವೀಡನ್ನಾಗಿ ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿ ನವ ಕರ್ನಾಟಕದ ನಿರ್ಮಾಣಕ್ಕೆ ಆ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಶಿವರಾತ್ರಿಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರೆಯ ವೇಳೆ ರೈತರಿಗೆ ಮತ್ತು ಗ್ರಾಮೀಣ ಜನರಿಗೆ ವೈಜ್ಞಾನಿಕ ಆವಿಷ್ಕಾರಗಳ, ಆಧುನಿಕ ಬೇಸಾಯ ಪದ್ಧತಿಗಳ ಬಗ್ಗೆ ಮಾಹಿತಿ ಕೊಡಿಸುವ ಮೂಲಕ ರೈತರ, ಗ್ರಾಮೀಣರ ಪ್ರಗತಿಗೂ ಕಾರಣವಾಗಿದ್ದರು ಎಂದರು.
ಪುಣ್ಯಪುರುಷರ ಸ್ಮರಣೆ ಆದರ್ಶ ಪಾಲನೆಗೆ ಸೋಪಾನ:
ಪುಣ್ಯಪುರುಷರ ಜಯಂತಿ, ಪುಣ್ಯಸ್ಮರಣೆ ಆಚರಣೆಯಿಂದ ಅವರ ಆದರ್ಶ, ಬೋಧನೆಗಳನ್ನು ಸ್ಮರಿಸುವ ಅವಕಾಶ ಲಭಿಸುತ್ತದೆ ಇದು ಅವರ ಆದರ್ಶಗಳ ಪಾಲನೆಗೆ ಸೋಪಾನವೂ ಆಗುತ್ತದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಶಾಸಕ ಬಿ.ಆರ್. ಪಾಟೀಲ್, ಸಭಾದ ಕಾರ್ಯದರ್ಶಿ ರೇಣುಕಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಡಾ.ಶಿವಕುಮಾರಸ್ವಾಮೀಜಿ ಜಗತ್ತಿಗೇ ಗುರುವಾಗಿದ್ದರು:ಈಶ್ವರ ಖಂಡ್ರೆ


