ಬೆಳಗಾವಿ: ಗಲ್ಫ್ ದೇಶಗಳಿಂದ ಚಿನ್ನ ಕಳ್ಳ ಸಾಗಣೆಯ ವರದಿಗಳಾಗುತ್ತಿರುವುದನ್ನು ಆಗಾಗ ನೋಡಿದ್ದೇವೆ. ಆದರೆ ಇದೀಗ, ಮತ್ತೊಂದು ಕಳ್ಳ ಸಾಗಣೆಯ ಸ್ಪೋಟಕ ವಿಚಾರವೊಂದನ್ನು ಬೆಳಗಾವಿ ಪೊಲೀಸರು ಬಯಲಿಗಳದಿದ್ದಾರೆ. ಗಲ್ಫ್ ದೇಶಗಳಿಂದ ಕರ್ನಾಟಕಕ್ಕೆ ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.
ಸೂಕ್ತ ದಾಖಲಾತಿಗಳು ಇಲ್ಲದೇ ಅಕ್ರಮವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಮುಂಬಯಿನಿಂದ ಬೆಂಗಳೂರಿಗೆ ಹೊರಡಲು ಅಣಿಯಾಗಿದ್ದ ಗುಜರಾತ ನೊಂದಣಿ ಹೊಂದಿರುವ ಪೆಟ್ರೋಲ್ ಉತ್ಪನ್ನದ ಟ್ಯಾಂಕರನ್ನು ನಗರದ ಮಾಳಮಾರುತಿ ಠಾಣೆಯ ಪೊಲೀಸರು ಪರಿಶೀಲಿಸಿದಾಗ ಅಕ್ರಮ ಲೆಕ್ಕಪತ್ರವಿಲ್ಲದೆ ಸಾಗಾಟವಾಗುತ್ತಿರುವುದು ಕಂಡುಬಂದಿದೆ.
ಗಲ್ಫ್ ರಾಷ್ಟ್ರಗಳಿಂದ ಬೃಹತ್ ಹಡಗುಗಳಲ್ಲಿ ಆಮದು ಮಾಡಿಕೊಳ್ಳಲಾಗುವ ಪೆಟ್ರೋಲಿಯಂ ತೈಲವನ್ನು ವಿವಿಧ ಹಂತದಲ್ಲಿ ಕಳ್ಳತನ ಮಾಡಿ ಸ್ವಪ್ರಯೋಜನಕ್ಕಾಗಿ ಸ್ಮಗ್ಲಿಂಗ್ ಮಾಡುತ್ತಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದು, ಬಂಧಿತ ಆರೋಪಿಗಳ ವಿಚಾರಣೆಯಲ್ಲಿ ಅದು ಧೃಢಪಟ್ಟಿದೆ.
ರಾಜ್ಯಸ್ಥಾನದ ಚಾಲಕ ದಿನೇಶಕುಮಾರ ಬಾಗೀರಥ ರಾಮ್ ಜೀ, ಸುಖದೇವ ಬಿಯಾರಾಮ್, ಮುಂಬೈನ ಇಸ್ತಿಯಾಕ ಶೇಖ್, ಕುಂದನ ಮಾತ್ರೆ, ರಾಯಗಢ ಸಮೀರ್ ಪರಾಂಗೆ, ಮುಂಬೈನ ಪ್ರವೀಣ ಚೌತಿ, ಕರ್ನಾಟಕದ ತುಮಕೂರಿನ ಅರಿಹಂತ ಎಂಬುವವರ ಮೇಲೆ ಮಾಳಮಾರುತಿ ಠಾಣೆಯಲ್ಲಿ ಆಗತ್ಯ ವಸ್ತುಗಳ ಕಾಯ್ದೆ 1955, ಮೋಟಾರ್ ಸ್ಪಿರೀಟ್ ಮತ್ತು ಹೈ ಸ್ಪೀಡ್ ಡಿಸೇಲ್ ವಿತರಕ ಮತ್ತು ಮಾಲ್ ಪ್ರಾಕ್ಟೀಸ್ ತಡೆಗಟ್ಟುವಿಕೆ, ಭಾರತೀಯ ನ್ಯಾಯ ಸಂಹಿತೆ 2023ರ ಅಡಿ ಪ್ರಕರಣ ದಾಖಲಿಸಿದ್ದಾರೆ.
12ಲಕ್ಷ ಮೌಲ್ಯದ ಟ್ಯಾಂಕರ್, 15ಲಕ್ಷ ಮೌಲ್ಯದ 17ಸಾವಿರ ಲೀಟರ್ ಡಿಸೇಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ.
ನಗರದ ಮಾಳಮಾರುತಿ ಠಾಣೆ ವ್ಯಾಪ್ತಿಯ ರಸ್ತೆ ಬಳಿ ನಿಂತಿದ್ದ ಲಾರಿಯನ್ನು ಗುಪ್ತ ಮಾಹಿತಿ ಮೇರೆಗೆ ತಪಾಸಣೆ ಕೈಗೊಂಡಾಗ ಪ್ರಕರಣ ಹೊರಬಂದಿದ್ದು, ಗಲ್ಫ್ ರಾಷ್ಟ್ರಗಳ ತೈಲ ಕದಿಯಲಾಗುತ್ತಿರುವ ಶಂಕೆಯ ಮೇರೆಗೆ ತನಿಖೆ ಕೈಗೊಳ್ಳಲಾಗುತ್ತದೆ. ಬಂದರು ಮತ್ತು ಹಡಗಿನ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗವಹಿಸಿರಬಹುದು ಎಂದು ಪೊಲೀಸರು ದಟ್ಟ ಸಂಶಯ ವ್ಯಕ್ತಪಡಿಸಿದ್ದು ಸ್ಪಷ್ಟತೆ ತನಿಖೆಯಿಂದ ತಿಳಿದು ಬರಬೇಕಿದೆ. ಪೆಟ್ರೋಲಿಯಂ ಉತ್ಪನ್ನ ಮಾತ್ರ ಯಾವುದೇ ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದುದು ಸದ್ಯಕ್ಕೆ ಖಚಿತಗೊಂಡಿದೆ.
ಮಾರ್ಕೇಟ್ ಎಸಿಪಿ ಸಂತೋಷ ಸತ್ಯನಾಯಕ, ಇನ್ಸಪೆಕ್ಟರ್ ಬಿ. ಆರ್. ಗಡ್ಡೇಕರ, ಹಾಗೂ ಸಿಬ್ಬಂಧಿ ದಾಳಿ ನಡೆಸಿದರು.


