ಬಳ್ಳಾರಿ, ಜ.21..: ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಬೇಕು ಮತ್ತು ಆಡಳಿತಾಧಿಕಾರಿಗಳನ್ನು ನೇಮಿಸಿದೆರೆ ಅದರ ವಿರುದ್ದ ನ್ಯಾಯಾಲಯದ ಮೊರೆ ಹೋಗಲಿದೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟ ಹೇಳಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಾಣಾಪುರ ನಾಗರಾಜ್ ಅವರು 2021 ರಲ್ಲಿ ಗ್ರಾಮ ಪಂಚಾಯ್ತಿಗೆ ಚುನಾವಣೆ ನಡೆದು ಅಧಿಕಾರಕ್ಕೆ ಬಂದಿತ್ತು. ಬರುವ ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧಿಕಾರ ಅವಧಿ ಮುಗಿಯುತ್ತದೆ. ನಂತರ ಆಡಳಿತಾಧಿಕಾರಿಗಳ ನೇಮಕಕ್ಕೆ ಸರ್ಕಾರ ಆದೇಶ ಮಾಡಿದೆ. ಆದರೆ 1993 ಕಾಯ್ದೆ ಪ್ರಕಾರ ಆಡಳಿತ ಅಧಿಕಾರಿಗಳ ನೇಮಕ ಮಾಡುವಂತಿಲ್ಲ. ಆದರೂ ಇದರ ಉಲ್ಲಂಘನೆ ಮಾಡಿ ಅಧಿಕಾರಿಗಳು, ತಮ್ಮ ಲಾಭಿಗಾಗಿ ಚುನಾವಣೆಯನ್ನು ಮುಂದೂಡಿ, ಆಡಳಿತಾಧಿಕಾರಿಗಳ ನೇಮಕ ಮಾಡುತ್ತಿದ್ದಾರೆಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಆಡಳಿತ ಅವಧಿಯ 2020 ರಲ್ಲಿ ಗ್ರಾಪಂ ಗಳ ಅವಧಿ ಮುಗಿದರೂ ಆರು ತಿಂಗಳು ಆಯ್ಕೆಯಾಗಿದ್ದವರನ್ನೇ ಮುಂದುವರಿಸಿತ್ತು. ಆದೇ ರೀತಿ ಈಗಲೂ ಮುಂದುವರೆಸಬೇಕು ಎಂದು ಸಿಎಂ, ಡಿಸಿಎಂ ಅವರಿಗೆ ಮನವಿ ಮಾಡಿದೆ. ಈ ಕುರಿತು ಚರ್ಚಿಸಲು ನಾಳೆ ಸಭೆ ಕರೆದಿದೆ. ಇದರಲ್ಲಿ ನಮ್ಮ ಬೇಡಿಕೆಯಂತೆ ನಿರ್ಣಯ ತೆಗೆದುಕೊಳ್ಳದಿದ್ದರೆ. ನ್ಯಾಯಾಲಯದ ಮೊರೆ ಹೋಗಲಿದೆಂದು ಹೇಳಿದರು.
ಸರ್ಕಾರದ ನಿರ್ಲಕ್ಷ: ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಬಂದ 2024-25 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯ ಅನುದಾನದ ಬಳಕೆ ಪ್ರಮಾಣ ಪತ್ರ ನೀಡದ ಕಾರಣ. ರಾಜ್ಯಕ್ಕೆ 2025-26 ನೇ ಸಾಲಿನ ಅನುದಾನದ ಹಣ ಬಿಡುಗಡೆ ಆಗಿಲ್ಲ. ಪ್ರತಿ ಗ್ರಾಮ ಪಂಚಾಯ್ತಿಗೆ ಇದರಡಿ 50 ಲಕ್ಷ ರೂ ಬರಬೇಕಿತ್ತು ಬಂದಿಲ್ಲ. ಕಾರಣ ರಾಜ್ಯ ಸರ್ಕಾರದ ನಿರ್ಲಕ್ಷ ಎಂದರು.
ಮರಳು ಗಣಿಗಾರಿಕೆ ರಾಜಧನ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ಬರಬೇಕಾದ ಅಂದಾಜು 136 ಲಕ್ಷ ರೂ ಆರ್ಥಿಕ ಇಲಾಖೆಯಲ್ಲಿ ಇದ್ದು. ಅದನ್ನು ತಂದು ಬಳಸಿಕೊಳ್ಳಲು ಜಿಒಂ ಸಿಈಓ ನಿರ್ಲಕ್ಷವಹಿಸಿದ್ದಾರೆಂದರು.
ಹುನ್ನಾರ: ವಿವಿಧ ಯೋಜನೆಯಡಿ ಅನುದಾನದಿಂದ ಬ್ಯಾಂಕಿನಲ್ಲಿ ದೊರೆತ ಬಡ್ಡಿ ಅನುದಾನ ಬಳಕೆಗೆ ಆದೇಶ ನೀಡಿ ಎರೆಡೇ ದಿನದಲ್ಲಿ ರದ್ದು ಮಾಡಿ ಬಳಕೆ ಮಾಡದಂತೆ ಮಾಡಿದೆ. ಇದರಲ್ಲಿ ಅಧಿಕಾರಿಗಳ ಹುನ್ನಾರ ನಡೆದಿದೆ. ಕಾರಣ ಈ ಅನುದಾನ ಆಡಳಿತಾಧಿಕಾರಿಗಳಿಂದ ಬಳಕೆ ಮಾಡುವುದಾಗಿದೆಂದು ಆರೋಪಿಸಿದರು.
ಕಳಪೆ ಸಾಮಾಗ್ರಿ: ತಾಲೂಕಿನ ಅಮರಾಪುರ, ಶ್ರಿಧರಗಡ್ಡೆ, ಹಂದ್ಯಾಳು ಗ್ರಾಮ ಪಂಚಾಯ್ತಿಗಳ ಅರಿವು ಕೇಂದ್ರಗಳಿಗೆ. ಕಳಪೆ ಸಾಮಗ್ರಿ ತಂದಿಟ್ಟು, ಮೂರು ಲಕ್ಷ ರೂ ಮೌಲ್ಯದ ಸಾಮಾಗ್ರಿಗೆ ಏಳು ಲಕ್ಷರೂ ಬಿಲ್ ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ಇದು ನಡೆಯುತ್ತಿದೆ. ಇದರ ಬಿಲ್ ಪಾವತಿಸದಂತೆ ತಡೆ ಹಿಡಿದಿದೆ. ಆದರೆ ಹಲವರು ಬಿಲ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಶ್ರೀಧರ್, ಯು.ಗಣೇಶ್ ಲಕ್ಷ್ಮೀರೆಡ್ಡಿ, ಹೇಮ ಮಂಜುನಾಥ ಇದ್ದರು.


