ಬಳ್ಳಾರಿ, ಜ.20:: ಪ್ರತಿಪಕ್ಷಗಳ ಆರೋಪದಂತೆ, ಮಾಧ್ಯಮಗಳ ವರದಿಯಂತೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮಟ್ಕಾ, ಇಸ್ಪೀಟ್, ಅಕ್ರಮ ಮರಳು ಸಾಗಾಣೆ, ಗಾಂಜಾ ಮಾರಾಟ, ಎಲ್ಲಂದರಲ್ಲಿ ಮದ್ಯಪಾನ ಮಾಡುತ್ತಿರುವುದು ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಇದಕ್ಕೆ ಯಾರ ಮುಲಾಜಿಗೆ ಒಳಗಾಗಬೇಕಿಲ್ಲ. ಅಕ್ರಮ ತಡೆಯದಿದ್ದರೆ. ಅದರಲ್ಲಿ ನಿಮ್ಮ ಪಾತ್ರ ಕಂಡು ಬಂದರೆ ನಾನು ಸಹ ಮುಲಾಜಿಲ್ಲದೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ನೂತನ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ತಮ್ಮ ಕೆಳ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರಂತೆ.
ನಗರದ ಬಿಡಿಎಎ ಸಭಾಂಗಣದಲ್ಲಿ ಕೆಳ ಹಂತದ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸಭೆ ನಡೆಸಿದ ಅವರು. ಇಲ್ಲಿ ವರೆಗೆ ಏನಾಗಿದಿಯೋ ಗೊತ್ತಿಲ್ಲ. ಯಾರ ರಕ್ಷಣೆಯಿಂದ ಹೀಗಾಗಿದೆಯೋ ಗೊತ್ತಿಲ್ಲ. ಇನ್ನು ಮುಂದೆ ನಡೆದರೆ ನಿಮ್ಮನ್ನು ಯಾರೂ ರಕ್ಷಣೆ ಮಾಡಲ್ಲ. ನಾನು ಯಾರನ್ನು ರಕ್ಷಣೆ ಮಾಡಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಇರಬೇಕು.
ಎಲ್ಲಿ ಏನು ನಡೆಯುತ್ತದೆ ಎಂಬುದು ನಿಮಗೆಲ್ಲ ಅರಿವಿರುತ್ತದೆ. ಅದನ್ನು ನೀವೇ ಇಂದಿನಿಂದ ನಿಲ್ಲಿಸಲು ಮುಂದಾಗಬೇಕು. ನಾನು ಪರಿಶೀಲನೆ ನಡೆಸಿದಾಗ ಅಕ್ರಮ ದಂಧೆ ಕಂಡು ಬಂದರೆ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಣೆಗಾರರಾಗಬೇಕಾಗುತ್ತದೆಂದು ಎಚ್ಚರಿಕೆ ನೀಡಿ ಕಳಿಸಿದ್ದಾರಂತೆ.
ಈ ಎಚ್ಚರಿಕೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂದು ಕಾದು ನೋಡಬೇಕಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಸಾಕ್ಷಿ ಸಮೇತ ನೀಡಿದರೆ ತಕ್ಷಣ ಕ್ರಮ ಜರುಗಲಿದೆಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಇನ್ನು ಪ್ರೆಸ್ ಎಂದು ಮಾಧ್ಯಮ ಕ್ಷೇತ್ರದಲ್ಲಿ ಇಲ್ಲದವರೂ ತಮ್ಮ ಬೈಕ್ ಗಳಿಗೆ ಬರೆಸಿಕೊಂಡು ಅಕ್ರಮ ಚಟುವಟೆಕೆ ನಡೆಸುವ ಬಗ್ಗೆಯೂ ಮಾಹಿತಿ ಬರುತ್ತಿದೆ. ಯಾರೇ ಆಗಲಿ ಅವರ ಮೇಲೆ ಕ್ರಮ ಜರುಗಿಸುವುದು ನಿಶ್ಚಿತ ಎಂದಿದ್ದಾರೆ.


