ಅವರು ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ನಾನು 152 ದೇವಸ್ಥಾನ ಕಟ್ಟಿ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

Sandeep Malannavar
ಅವರು ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ನಾನು 152 ದೇವಸ್ಥಾನ ಕಟ್ಟಿ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 
WhatsApp Group Join Now
Telegram Group Join Now
ಬೆಳಗಾವಿ :  ಅವರು ಕೇವಲ ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ಆದರೆ ಹಿಂದೂಗಳಿಗೆ ಏನೂ ಮಾಡುವುದಿಲ್ಲ. ನಾನು ಕೇವಲ ಭಾಷಣ ಮಾಡದೆ, ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ, ಕ್ಷೇತ್ರದಲ್ಲಿ 152 ದೇವಸ್ಥಾನ ಕಟ್ಟಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳ್ಳಿ ಗ್ರಾಮದಲ್ಲಿ ಮಂಗಳವಾರ ಸುಮಾರು 7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
 ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ 7 ವರ್ಷದಿಂದ ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಮ್ಮೆ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು 7 ವರ್ಷದ ಹಿಂದೆ ಹೇಳಿದ್ದೆ. ಅದರಂತೆ ಅಭಿವೃದ್ಧಿ ಮಾಡಿ ತೋರಿಸಿದೆ. ಹಾಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ. ಗ್ರಾಮೀಣ ಕ್ಷೇತ್ರ ಬೆಳೆಸುತ್ತಿದ್ದೇನೆ, ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ. ಈ ಸ್ಪೀಡ್ ಕಟ್ ಮಾಡ ಬೇಡಿ. ನನಗೆ ಸುಧಾರಣೆ ಮಾಡುವ ಅವಕಾಶ ಸಿಕ್ಕಿದೆ, ನಿಮಗೆ ಸುಧಾರಣೆ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನೀವು ಮಗಳೆಂದು ಸ್ವೀಕಾರ ಮಾಡಿದ್ದೀರಿ. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ ಎಂದು ಅವರು ಮಾರ್ಮಿಕವಾಗಿ ನುಡಿದರು.
 ನಾನು ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಹೆಣ್ಣುಮಗಳಲ್ಲ, ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬೇರೆ ಬೇರೆ ಮಂತ್ರಿಗಳು, ಅಧಿಕಾರಿಗಳ ಬಳಿ ಹೋಗಿ ಕೆಲಸ ತರುತ್ತಿದ್ದೇನೆ. ಈ ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ರಾಜ್ಯಕ್ಕೆ ಗೊತ್ತಿರಲಿಲ್ಲ. ಈಗ ಅಭಿವೃದ್ಧಿಯ ಮೂಲಕ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗುವಂತೆ ಮಾಡಿದ್ದೇನೆ. ಒಂದು ಊರಲ್ಲಿ ಜಾತ್ರೆಯಾದರೆ ಇಡೀ ಊರನ್ನು ಸುಧಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರತಿ ಗ್ರಾಮಕ್ಕೆ 5 -10 ಕೋಟಿ ರೂ. ಕೆಲಸ ತರುತ್ತಿದ್ದೇನೆ. ಈ ಹಿಂದೆ ಯಾರೂ ಇಷ್ಟು ಹಣ ಕೊಟ್ಟಿರಲಿಲ್ಲ ಎಂದ ಅವರು, ನಾನಾಗಲಿ, ಸಹೋದರ ಚನ್ನರಾಜ ಆಗಲಿ, ಮಗ ಮೃಣಾಲ ಆಗಲಿ ರಾಜಕಾರಣ ಮಾಡಲು ಬಂದಿಲ್ಲ, ಜನ ಸೇವೆ ಮಾಡಬೇಕು, ಜನರ ಪ್ರೀತಿಗಳಿಸಬೇಕೆಂದು ಬಂದವರು. ಒಳ್ಳೆಯ ಹೆಸರು ಮಾಡಬೇಕೆಂದು ನಾವು ಬಂದವರು. ನಮ್ಮ ಕೈಲಾದಷ್ಟು ಜನರ ಸೇವೆ ಮಾಡಿ ನಿಮ್ಮ ಪ್ರೀತಿ ಗಳಿಸುತ್ತಿದ್ದೇವೆ. ಸನ್ಮಾನದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಳೆದ 7 ವರ್ಷಗಳಿಂದ ಗ್ರಾಮೀಣ ಕ್ಷೇತ್ರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.
 ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಹೊಲಕ್ಕೆ ಸಾಗುವ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಸಹ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು.
ಈ ವೇಳೆ ಸುರೇಶ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಿಂಗಪ್ಪ ಶಹಾಪೂರಕರ್, ಸುರೇಶ್ ಮುಚ್ಚಂಡಿ, ನಾಗೇಶ್ ದೇಸಾಯಿ, ಸಿಪಿ ನಾಗನಗೌಡ, ಪ್ರಕಾಶ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಹಿರೇಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article