ಬಳ್ಳಾರಿ: ಬ್ಯಾನರ್ ಗಲಾಟೆ, ಫೈರಿಂಗ್, ಕಾನೂನು ಕುಸಿತ ಖಂಡಿಸಿ ಬಿಜೆಪಿ ಭಾರೀ ಪ್ರತಿಭಟನೆ – ಬಿ.ಎಸ್. ವಿಜಯೇಂದ್ರ ಕಿಡಿ
ಬಳ್ಳಾರಿ:17- ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ, ಫೈರಿಂಗ್ ಘಟನೆಗಳು ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಕೊಲೆ, ದರೋಡೆ, ದರ್ಪ, ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ನೇರ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ವಿಜಯೇಂದ್ರ ಅವರು ಗಂಭೀರ ಆರೋಪ ಮಾಡಿದರು.
ಬಳ್ಳಾರಿ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಭಾರೀ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯವನ್ನು ಅರಾಜಕತೆಯತ್ತ ತಳ್ಳುತ್ತಿದೆ ಎಂದು ಕಟುವಾಗಿ ಟೀಕಿಸಿದರು.
ಬಿ.ವೈ. ವಿಜಯೇಂದ್ರ ಹೇಳಿಕೆ: ವಾಲ್ಮೀಕಿ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?
ಬಳ್ಳಾರಿ: ವಾಲ್ಮೀಕಿ ಸಮುದಾಯದ ಪರವಾಗಿ ನಿಮ್ಮ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು. ನಮ್ಮ ನಾಯಕ ಶ್ರೀರಾಮುಲು ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಇದ್ದ ಶೇಕಡಾ 3ರಷ್ಟು ಮೀಸಲಾತಿಯನ್ನು ನಮ್ಮ ಸರ್ಕಾರ ಶೇಕಡಾ 7ಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದರು.
ಶ್ರೀರಾಮುಲು ಹಾಗೂ ಜನಾರ್ಧನ್ ರೆಡ್ಡಿ ಅವರು ಕೈಗೊಂಡಿರುವ ಪಾದಯಾತ್ರೆಗೆ ಯಾವುದೇ ರೀತಿಯ ವಿರೋಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಹೋರಾಟ ಯಾರನ್ನೂ ಕೆಡವುವುದಿಲ್ಲ, ಯಾರ ವಿರುದ್ಧವೂ ಅಲ್ಲ; ಇದು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಅವರು ಹೇಳಿದರು.
ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧಿಗಳಿಗೆ ಸರ್ಕಾರವೇ ರಕ್ಷಣೆಯಾಗಿ ನಿಂತಂತಿದೆ. ರಾಜಕೀಯ ದ್ವೇಷದ ಕಾರಣದಿಂದಲೇ ಗಲಾಟೆ, ಹಿಂಸಾಚಾರ ಹಾಗೂ ಫೈರಿಂಗ್ ಪ್ರಕರಣಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಮಾನ್ಯ ನಾಗರಿಕರು ಭಯಭೀತ ವಾತಾವರಣದಲ್ಲಿ ಬದುಕುವಂತಾಗಿದ್ದು, ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ವಿಜಯೇಂದ್ರ ಹೇಳಿದರು.
ಫೈರಿಂಗ್‌ನಂತಹ ಭೀಕರ ಘಟನೆಗಳು ನಡೆದರೂ ಕಾಂಗ್ರೆಸ್ ಸರ್ಕಾರ ಯಾವುದೇ ನೈತಿಕ ಹೊಣೆಗಾರಿಕೆ ವಹಿಸಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದು ರಾಜ್ಯದಲ್ಲಿ ಕಾನೂನು ಪ್ರಭುತ್ವವೇ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರೈತ ವಿರೋಧಿ, ಜನ ವಿರೋಧಿ, ಅಭಿವೃದ್ಧಿ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ, ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ, ಯುವಕರಿಗೆ ಉದ್ಯೋಗ ಇಲ್ಲ, ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.
ಬಳ್ಳಾರಿಯಂತಹ ಗಣಿಗಾರಿಕೆ, ಕೈಗಾರಿಕೆ ಹಾಗೂ ಕೃಷಿಗೆ ಮಹತ್ವವಿರುವ ಜಿಲ್ಲೆಯಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಜನರು ಭಯ ಮತ್ತು ಅಸುರಕ್ಷಿತತೆಯ ನಡುವೆ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಪಾಲನೆ ಮಾಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರದ ವಿರುದ್ಧ ಜನರ ಆಕ್ರೋಶ ದಿನೇದಿನೇ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ಸರಿಯಾದ ಪಾಠ ಕಲಿಸಲಿದ್ದಾರೆ. ಬಳ್ಳಾರಿಯ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಗಾಗಿ ಬಿಜೆಪಿ ಸದಾ ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ಭರವಸೆ ನೀಡಿದರು.
ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೀನಹಳ್ಳಿ ತಾಯಣ್ಣ ಅವರು, ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ತನಿಖಾ ಸಂಸ್ಥೆಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಸಹ ಅವರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಆದರೆ ನಿಜವಾದ ತಪ್ಪಿತಸ್ಥರ ಮೇಲೆ ಯಾವುದೇ ರೀತಿಯ ಶಿಕ್ಷೆ ಆಗಿಲ್ಲ ಎಂದು ಆರೋಪಿಸಿದರು.
ಸತೀಶ್ ರೆಡ್ಡಿ ಅವರ ಗನ್‌ಮನ್ ಮೂಲಕ ನಡೆದ ಫೈರಿಂಗ್ ಘಟನೆ ಅತ್ಯಂತ ಖಂಡನೀಯವಾಗಿದೆ. ಇಂತಹ ಗಂಭೀರ ಪ್ರಕರಣಗಳಿಗೂ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿರುವುದು ಕಾನೂನು ವ್ಯವಸ್ಥೆ ಕುಸಿದಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಮೀನಹಳ್ಳಿ ತಾಯಣ್ಣ ಹೇಳಿದರು.
ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕ ಸೋಮಶೇಖರ್ ರೆಡ್ಡಿ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭರತ್ ರೆಡ್ಡಿ ಒಬ್ಬ ಅಸಮರ್ಥ ಶಾಸಕ ಎಂದು ಆರೋಪಿಸಿದ ಅವರು, ಭರತ್ ರೆಡ್ಡಿಗೆ ಕ್ರಿಮಿನಲ್ ಮನೋಭಾವನೆ ಇದೆ ಎಂದು ಕಿಡಿಕಾರಿದರು.
ನಾನು ಯಾವುದೇ ಸಮಯದಲ್ಲೂ ಯಾರೊಬ್ಬರ ಮನೆಯ ಮುಂದೆ ಹೋಗಿ ಗಲಾಟೆ ಮಾಡಿಲ್ಲ. ಆದರೆ ಬಳ್ಳಾರಿ ಜನರು ಈಗಾಗಲೇ ಭರತ್ ರೆಡ್ಡಿಗೆ “ಗಾಂಜಾ ಎಂಎಲ್‌ಎ”, “ಅಸಮರ್ಥ ಎಂಎಲ್‌ಎ”, “ಗುಂಡಾ ಎಂಎಲ್‌ಎ” ಎಂಬ ಹೆಸರಿಟ್ಟಿದ್ದಾರೆ. ಇದು ಅವರ ಆಡಳಿತ ಹಾಗೂ ವರ್ತನೆಯ ಬಗ್ಗೆ ಜನರಿಗೆ ಇರುವ ಅಸಮಾಧಾನದ ಪ್ರತಿಬಿಂಬವಾಗಿದೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.
ಬಳ್ಳಾರಿಯಲ್ಲಿ ನಡೆಯುತ್ತಿರುವ ಗಲಾಟೆ, ಹಿಂಸಾಚಾರ ಮತ್ತು ಕಾನೂನು ಕುಸಿತಕ್ಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣ. ಇಂತಹ ಅಸಮರ್ಥ ಆಡಳಿತದ ವಿರುದ್ಧ ಜನರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಗಾಳಿ ಲಕ್ಷ್ಮಿ ಅರುಣಾ ಅವರು ಶಾಸಕ ಭರತ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನನ್ನ ಪತಿಗೆ ರಾಜಕೀಯ ಅನುಭವ ಇದ್ದಷ್ಟು ನಿನ್ನ ವಯಸ್ಸು ಹಾಗೂ ರಾಜಕೀಯ ಅನುಭವವೂ ಇಲ್ಲ ಎಂದು ಆರೋಪಿಸಿದ ಅವರು, “ನಾವು ನಿನ್ನನ್ನು ರೌಡಿಯೆಂದು ಕರೆಯುತ್ತೇವೆ” ಎಂದು ಕಿಡಿಕಾರಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಷ್ಟೇ ಕುತಂತ್ರ ಮಾಡಿದರು ನನ್ನ ಪತಿಯನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಭರತ್ ರೆಡ್ಡಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ಇಂತಹ ರಾಜಕೀಯದಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭರತ್ ರೆಡ್ಡಿ ಒಬ್ಬ ರೌಡಿ, ಗುಂಡಾ ಹಾಗೂ ಭ್ರಷ್ಟಾಚಾರಿ ಎಂದು ಆರೋಪಿಸಿದ ಗಾಳಿ ಲಕ್ಷ್ಮಿ ಅರುಣಾ ಅವರು, ಇಸ್ಪೇಟ್, ಮಟ್ಕಾ ಹಾಗೂ ರೌಡಿ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು. ಭರತ್ ರೆಡ್ಡಿಯ ಮೇಲೆ ನಂಬಿಕೆ ಇಟ್ಟ ಪರಿಣಾಮ ಒಬ್ಬ ಅಮಾಯಕನ ಪ್ರಾಣ ಹೋಗಿದೆ. ಇದಕ್ಕೂ ನಿನಗೆ ಮನಸ್ಸಾಕ್ಷಿ ಇಲ್ಲವೇ ಎಂದು ಪ್ರಶ್ನಿಸಿದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಭರತ್ ರೆಡ್ಡಿಯನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ಬಳ್ಳಾರಿಯಲ್ಲಿ ನಡೆದ ಘಟನೆಗಳಿಗೆ ನಿಷ್ಪಕ್ಷಪಾತ ತನಿಖೆ ಅಗತ್ಯವಿದ್ದು, ಸತ್ಯ ಹೊರಬರಬೇಕೆಂದು ಹೇಳಿದರು.
ಈ ಸಂಕಷ್ಟದ ಸಮಯದಲ್ಲಿ ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿರುವ ಬಿಜೆಪಿ ಪಕ್ಷದ ಎಲ್ಲ ನಾಯಕರಿಗೂ ಹಾಗೂ ಕಾರ್ಯಕರ್ತರಿಗೂ ನಾನು ಚಿರಋಣಿಯಾಗಿದ್ದೇನೆ ಎಂದು ಗಾಳಿ ಲಕ್ಷ್ಮಿ ಅರುಣಾ ತಿಳಿಸಿದರು.
ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಚಲುವಾದಿ ನಾರಾಯಣಸ್ವಾಮಿ ಅವರು, “ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವುದು ಎಲ್ಲಿದೆ? ಬಳ್ಳಾರಿ ಯಾವುದಾದರೂ ಬೇರೆ ದೇಶವೇ?” ಎಂದು ಪ್ರಶ್ನಿಸುವ ಮೂಲಕ ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಮಹರ್ಷಿಯನ್ನು ಎಲ್ಲರೂ ಪೂಜಿಸಬೇಕು. ರಾಜ್ಯದಾದ್ಯಂತ ವಾಲ್ಮೀಕಿ ಪುತಳಿಗಳನ್ನು ಸ್ಥಾಪಿಸಬೇಕು ಎಂಬುದು ನಮ್ಮ ಆಶಯ. ಆದರೆ ಭರತ್ ರೆಡ್ಡಿ ಅವರು ಬ್ಯಾನರ್ ನೆಪವನ್ನು ಮುಂದಿಟ್ಟುಕೊಂಡು ವಾಲ್ಮೀಕಿ ಪರ ಹೋರಾಟಗಾರರನ್ನು ಕೊಲೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಭರತ್ ರೆಡ್ಡಿ ಅವರು “ಐದು ನಿಮಿಷ ಕೊಡಿ, ಅವರನ್ನು ಭಸ್ಮ ಮಾಡ್ತೀನಿ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಇಂತಹ ಹೇಳಿಕೆಗಳು ಕಾನೂನು ವ್ಯವಸ್ಥೆ ಎಷ್ಟು ಕುಸಿದಿದೆ ಎಂಬುದಕ್ಕೆ ಸಾಕ್ಷಿ. ಜನಪ್ರತಿನಿಧಿಯೊಬ್ಬರಿಂದಲೇ ಇಂತಹ ಮಾತುಗಳು ಹೊರಬರುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ಶ್ರೀರಾಮುಲು, ಜನಾರ್ಧನ್ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಅವರ ಧ್ವನಿ ಈ ರಾಜ್ಯಕ್ಕೆ ಕೇಳಬೇಕು. ದಬ್ಬಾಳಿಕೆ, ಅರಾಜಕತೆ ಮತ್ತು ಅನ್ಯಾಯದ ವಿರುದ್ಧ ಈ ನಾಯಕರು ಧ್ವನಿ ಎತ್ತಲೇಬೇಕು ಎಂದು ಅವರು ಆಗ್ರಹಿಸಿದರು.
ಗನ್ ನಿನ್ನದು, ಗುಂಡು ನಿನ್ನದು, ಆದರೆ ಸತ್ತ ವ್ಯಕ್ತಿ ಯಾರು? ಈ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕು. ಒಬ್ಬ ಅಮಾಯಕನ ಪ್ರಾಣ ಹೋಗಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಚಲುವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಇಲ್ಲಿವರೆಗೂ ಭರತ್ ರೆಡ್ಡಿ ಅಥವಾ ಸತೀಶ್ ರೆಡ್ಡಿಯನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಜನಾರ್ಧನ್ ರೆಡ್ಡಿ: ನನ್ನ ಪ್ರಾಣ ಬಳ್ಳಾರಿ ಜನತೆಯಲ್ಲಿದೆ
ಬಳ್ಳಾರಿ:
“ನನ್ನ ಪ್ರಾಣ ಎಲ್ಲಿ ಇದೆ ಅಂದ್ರೆ ಅದು ಬಳ್ಳಾರಿ ಜನತೆಯಲ್ಲಿ ಇದೆ. ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿ ಇಟ್ಟರೂ ನನಗೆ ಏನೂ ಮಾಡಲಾಗಲಿಲ್ಲ” ಎಂದು ಮಾಜಿ ಸಚಿವ ಜನಾರ್ಧನ್ ರೆಡ್ಡಿ ಹೇಳಿದರು.
ನನ್ನ ಮನೆ ಮೇಲೆ ನಡೆದ ದಾಳಿಗೆ ಮುಖ್ಯ ಕಾರಣ ಡಿಎಸ್ಪಿ ನಂದ ರೆಡ್ಡಿ ಹಾಗೂ ಎಎಸ್ಪಿ ರವಿ ಕುಮಾರ್ ಎಂದು ಅವರು ಗಂಭೀರ ಆರೋಪ ಮಾಡಿದರು. ಬಳ್ಳಾರಿಯಲ್ಲಿ ನಡೆಯುತ್ತಿರುವ ಮಟ್ಕಾ ಮತ್ತು ಜೂಜಾಟಗಳಿಗೆ ಈ ಇಬ್ಬರು ಅಧಿಕಾರಿಗಳೇ ಪ್ರಮುಖ ಕಾರಣ ಎಂದು ಅವರು ಹೇಳಿದರು.
ಇಡೀ ಕರ್ನಾಟಕವನ್ನು ಕಾಂಗ್ರೆಸ್ ‘ರಿಪಬ್ಲಿಕ್’ ಆಗಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ ಜನಾರ್ಧನ್ ರೆಡ್ಡಿ, “ನಾನು ಇಂದು ಬದುಕಿದ್ದೇನೆ ಎಂದರೆ, ಇಡೀ ಕಲ್ಯಾಣ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ಸುತ್ತಿ ಕಾಂಗ್ರೆಸ್ ಅನ್ನು ನೆಲಸಮ ಮಾಡುತ್ತೇನೆ” ಎಂದು ಕಿಡಿಕಾರಿದರು.
ನಿಮ್ಮ ಸರ್ಕಾರದ ಪೊಲೀಸ್ ಇಲಾಖೆಯಿಂದ ನನಗೆ ಯಾವುದೇ ರಕ್ಷಣೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಭರತ್ ರೆಡ್ಡಿಗೆ ತಕ್ಷಣ ರಕ್ಷಣೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜೊತೆಗೆ, 24 ಗಂಟೆಗಳ ಒಳಗೆ ಭರತ್ ರೆಡ್ಡಿಯನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಬಳ್ಳಾರಿ: ಡಿಎಸ್ಪಿ–ಎಎಸ್‌ಪಿ ವಿರುದ್ಧ ಕಠಿಣ ಎಚ್ಚರಿಕೆ – “ನನ್ನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಶ್ರೀರಾಮುಲು ಗಂಭೀರ ಮಾತು
ಬಳ್ಳಾರಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಹಾಗೂ ಗಂಭೀರ ಶೈಲಿಯಲ್ಲಿ ಮಾತನಾಡಿದರು. ಡಿಎಸ್ಪಿ ನಂದಾ ರೆಡ್ಡಿ ಮತ್ತು ಎಎಸ್‌ಪಿ ರವಿ ಕುಮಾರ್ ಅವರನ್ನು ನೇರವಾಗಿ ಉದ್ದೇಶಿಸಿ, “ನೀವು ಕಾನೂನಿನಿಂದ ತಪ್ಪಿಸಿಕೊಳ್ಳಬಹುದು, ಆದರೆ ನನ್ನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಎಚ್ಚರಿಕೆ ನೀಡಿದರು.
“ನೀವು ನಿವೃತ್ತರಾದರೂ ಬಳ್ಳಾರಿಗೆ ಕರೆಸಿ ಪ್ರಶ್ನಿಸಲಾಗುತ್ತದೆ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ” ಎಂದು ಹೇಳುವ ಮೂಲಕ ಪೊಲೀಸ್ ಅಧಿಕಾರಿಗಳಿಗೆ ತೀವ್ರ ಸಂದೇಶ ರವಾನಿಸಿದರು. ಈ ಮಾತುಗಳು ಸಮಾವೇಶದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.
ಜನವರಿ 1ರಂದು ನಡೆದ ಗಲಭೆ ಬಳಿಕ ನಮ್ಮ ಪಕ್ಷದ ಎಲ್ಲಾ ನಾಯಕರು ನಮ್ಮ ಬೆನ್ನಲ್ಲೇ ನಿಂತಿದ್ದಾರೆ ಎಂದು ತಿಳಿಸಿದ ಶ್ರೀರಾಮುಲು, “ಈ ಸಮಾವೇಶ ಯಾರೊಬ್ಬರ ರಕ್ಷಣೆಗೆಲ್ಲ; ಇದು ಕಲ್ಯಾಣ ಕರ್ನಾಟಕದ ರಕ್ಷಣೆಗೆ” ಎಂದು ಸ್ಪಷ್ಟಪಡಿಸಿದರು.
ಭರತ್ ರೆಡ್ಡಿ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಶ್ರೀಮಂತನೋ, ವಿದೇಶದಲ್ಲಿ ಓದಿದ್ದೇನೋ ಎಂಬುದನ್ನು ಜನರು ನೋಡಲ್ಲ. ವ್ಯಕ್ತಿಯ ಸಂಸ್ಕಾರವೇ ಮುಖ್ಯ” ಎಂದು ತಿರುಗೇಟು ನೀಡಿದರು. ಜೊತೆಗೆ, “ರಾಮುಲು ಜೊತೆ ಈ ರೀತಿಯ ವರ್ತನೆ ಬೇಡ; ನಾನು ಪ್ರೀತಿಯಿಂದ ರಾಜಕೀಯ ಮಾಡುವವನು” ಎಂದು ಎಚ್ಚರಿಸಿದರು.
ಸತೀಶ್ ರೆಡ್ಡಿ ಅವರ ಅಂಗಾರಕ್ಷಕರು ಗುಂಡಿನ ದಾಳಿ ನಡೆಸಿದರು ಎಂಬ ಆರೋಪದ ಹಿನ್ನೆಲೆ, ಬಳ್ಳಾರಿ ಜನರ ಆಶೀರ್ವಾದದಿಂದ ಜನಾರ್ಧನ್ ರೆಡ್ಡಿಗೆ ಏನೂ ಆಗಿಲ್ಲ ಎಂದು ತಿಳಿಸಿದರು. ಅಲ್ಲದೇ, ಮೃತ ರಾಜಶೇಖರ್ ರೆಡ್ಡಿ ಅವರ ಕುಟುಂಬಕ್ಕೆ ಜನಾರ್ಧನ್ ರೆಡ್ಡಿ ತಮ್ಮ ಸ್ವಂತ ಹಣದಿಂದ 10 ಲಕ್ಷ ರೂ. ನೆರವು ನೀಡಿದ್ದಾರೆ ಎಂದರು.
ಪೊಲೀಸ್ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ನೀಡಿದ ಶ್ರೀರಾಮುಲು, “ಸೂರ್ಯ–ಚಂದ್ರ ಎಷ್ಟು ಸತ್ಯವೋ, 2028ರಲ್ಲಿ ನಮ್ಮ ಸರ್ಕಾರ ಬರೋದು ಅಷ್ಟೇ ಸತ್ಯ. ಈಗ ತಪ್ಪು ಮಾಡಿ ತಪ್ಪಿಸಿಕೊಳ್ಳಬಹುದು; ಆದರೆ ಮುಂದಿನ ಚುನಾವಣೆಯಲ್ಲಿ ಜನರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ನಾಯಕರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನೂರಾರು ಮಂದಿ ಸಾರ್ವಜನಿಕರು ಭಾಗವಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳ್ಳಾರಿಯಲ್ಲಿ ಕಾನೂನು ಸುವ್ಯವಸ್ಥೆ ಪುನಃ ಸ್ಥಾಪನೆಗೊಳಿಸುವಂತೆ ಹಾಗೂ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.


