ಕೊಪ್ಪಳ, ಜ,೧೮;- ಆಡಳಿತಾತ್ಮಕ ತರಬೇತಿ ಕಾರ್ಯಗಾರಗಳು ಸ್ಥಿರವಾದ ಆಡಳಿತ ನೀಡಲು ಸಹಕಾರಿಯಾಗುತ್ತವೆ. ಈ ತರಬೇತಿ ಕಾರ್ಯಗಾರಗಳು ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ವೃದ್ಧಸಿಕೊಳ್ಳುವಲ್ಲಿ ಮತ್ತು ಮಕ್ಕಳ ಉತ್ತಮ ಫಲಿತಾಂಶ ಗಳಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್.ಜಗದೀಶರವರು ನುಡಿದರು.
ಅವರು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗೆ ಒಂದು ದಿನದ ಆಡಳಿತಾತ್ಮಕ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಕಾಲೇಜಿನ ಫಲಿತಾಂಶ ಸುಧಾರಣೆಗೆ ಉಪನ್ಯಾಸಕರ ಪರಿಶ್ರಮದ ಜೊತೆಗೆ ಪ್ರಾಚಾರ್ಯರ ಪಾತ್ರವೂ ಬಹಳ ದೊಡ್ಡದಿದೆ. ಕಾಲೇಜಿನ ಆಡಳಿತದ ನಿರ್ವಹಣೆ ಜೊತೆಗೆ ಇಡೀ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಒಟ್ಟೊಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ಧಾರಿ ಪ್ರಾಚಾರ್ಯರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಬಸಪ್ಪ ನಾಗೋಲಿಯವರು ಮಾತನಾಡಿ ಪ್ರಾಚಾರ್ಯರು ಸಕಲ ಸಿಬ್ಬಂದಿಗಳ ನಂಬಿಕೆ, ವಿಶ್ವಾಸ, ಪ್ರೀತಿಯಿಂದ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಉತ್ತಮ ಬಾಂಧ್ಯವ್ಯ ಬೆಳೆಯುತ್ತದೆ ಮತ್ತು ಇಲಾಖೆ ನಿರೀಕ್ಷಿತ ಉತ್ತಮ ಫಲಿತಾಂಶ ಗಳಿಸಬಹುದು ಎಂದರು. ವೇದಿಕೆಯ ಮೇಲೆ ಡಯಾಟ್ನ ನಿವೃತ್ತ ಅಧಿಕಾರಿಗಳಾದ ಕೃಷ್ಣಮೂರ್ತಿ ದೇಸಾಯಿ, ಹಿರಿಯ ಪ್ರಾಚಾರ್ಯರುಗಳಾದ ಅನಿಲಕುಮಾರ ಜಿ, ರಾಜಶೇಖರ ಪಾಟೀಲ್, ಶಿವಾನಂದ ಎ.ಆರ್ ಹಾಗೂ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಗಳಾದ ಬಸವರಾಜ, ಕೋಶಾಧ್ಯಕ್ಷರಾದ ಶಾಂತಪ್ಪ ಟಿ.ಸಿ, ಪರಿಕ್ಷಾ ಸಂಚಾಲಕರಾದ ಡಾ.ರವಿ ಚವ್ಹಾಣ ಮತ್ತು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರಗೌಡ ಮುಂತಾದವರು ಉಪಸ್ಥಿತರಿದ್ದರು.

ಕುಮಾರಿ ಕವಿತಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಬಸವರಾಜ ಸ್ವಾಗತಿಸಿದರೆ ಕೊನೆಗೆ ಲಕ್ಷ್ಮಣಸಿಂಗ್ ವಂದಿಸಿದರು. ಮಂಜುನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಜಾನಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಕವಿತಾ ಶಿವಪ್ಪ ಕಾಶಿಯಾರ ಹಾಗೂ ರಾಜ್ಯಮಟ್ಟ ಜಂಪ್ರೋಫ್ ಕ್ರೀಡಾಕೂಟ ಆಯೋಜಿಸಿದ ಭೀಮಪ್ಪ ಗೊಲ್ಲರ್, ನಿವೃತ್ತ ಪ್ರಾಚಾರ್ಯರಾದ ಅನಿಲಕುಮಾರ ಮತ್ತು ಉತ್ತಮ ಕಾರ್ಯ ನಿರ್ವಹಿಸಿದ ಎಸ್.ವ್ಹಿ.ಮೇಳಿ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ನಡೆದ ತರಬೇತಿಯಲ್ಲಿ ಕೆಸಿಎಸ್ಆರ್ ನಿಯಮಗಳು ಕುರಿತು ಕೃಷ್ಣಮೂರ್ತಿ ದೇಸಾಯಿ, ನಗದು ಪುಸ್ತಕ ಮತ್ತು ವೋಚರ್ ನಿರ್ವಹಣೆ ಕುರಿತು ಶಾಂತಪ್ಪ ಟಿ.ಸಿ., ಪ್ರಾಚಾರ್ಯರ ಸವಾಲು ಮತ್ತು ಸಾಧ್ಯತೆಗಳು ಕುರಿತು ರಾಜಶೇಖರ ಪಾಟೀಲ್, ಇಎಸ್ಆರ್ ಮಾಹಿತಿ ಕುರಿತು ಎಂ.ಎಂ.ಖಾಜಿ, ಎಚ್ಆರ್ಎಂಎಸ್ ೨.ಒ ಮಾಹಿತಿ ವಿದ್ಯಾಧರ ಮೇಘರಾಜ ಮತ್ತು ಸಂವಾದದಲ್ಲಿ ಡಾ.ರವಿ ಚವ್ಹಾಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ತರಭೇತಿ ಕಾರ್ಯಗಾರದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು ಒಂದು ನೂರಕ್ಕೂ ಅಧಿಕ ಪ್ರಾಚಾರ್ಯರು ಭಾಗವಹಿಸಿದ್ದರು.


