ಲಕ್ಕುಂಡಿಯಲ್ಲಿ ಉತ್ಖನನ ಆರಂಭ

Hasiru Kranti
ಲಕ್ಕುಂಡಿಯಲ್ಲಿ ಉತ್ಖನನ ಆರಂಭ
WhatsApp Group Join Now
Telegram Group Join Now
ಉತ್ಖನನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್*

ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ ನೇತೃತ್ವ

ಗದಗ: ತಾಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಶುಕ್ರವಾರ ಉತ್ಖನನಕ್ಕೆ ಚಾಲನೆ ನೀಡಿದರು.

ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಉತ್ಖನನ ಆರಂಭವಾಗಿದ್ದು, ಉತ್ಖನನ ಕುರಿತು ಪುರಾತತ್ವ ಅಧಿಕಾರಿಗಳು ಕಾರ್ಮಿಕರಿಗೆ ಮಾಹಿತಿ ನೀಡಿದರು.

20 ಜನ ಮಹಿಳೆಯರು, 10 ಜನ ಪುರುಷರು ಸೇರಿ ಒಟ್ಟು 30 ಕಾರ್ಮಿಕರಿಂದ ಉತ್ಖನನ ಕಾರ್ಯ ಮುಂದುವರಿದಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರಾಚೀನ ವಸ್ತುಗಳ ಬಗೆಗೆ ಉತ್ಖನನ ಮಾಡುವ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಿ, ನಾಜೂಕಿನಿಂದ ಉತ್ಖನನ ಪ್ರಕ್ರಿಯೆ ನಡೆಸಬೇಕು. ಅಲ್ಲದೇ, ಯಾವುದೇ ವಸ್ತು ಸಿಕ್ಕರೂ ಅದನ್ನು ಅಧಿಕಾರಿಗಳಿಗೆ ತಿಳಿಸಬೇಕು. ಭೂಮಿ ಅಗೆಯುವಾಗ ಸೂಕ್ಷ್ಮತೆ ಇರಲಿ ಎಂದು ಸೂಚನೆ ನೀಡಿದರು.

ಶುಕ್ರವಾರ ಬೆಳಿಗ್ಗೆ 11ರಿಂದ ಆರಂಭವಾದ ಉತ್ಖನನವು ಸಂಜೆ 5.30ರ ವರೆಗೆ ನಡೆದಿದ್ದು, ದಿನದ ಅಂತ್ಯಕ್ಕೆ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ 10/10 ಅಡಿಯ ಸುತ್ತಳತೆಯಲ್ಲಿ ನಡೆದ ಉತ್ಖನನದಲ್ಲಿ ಶುಕ್ರವಾರ ಕೇವಲ 1 ಅಡಿ ಆಳದಷ್ಟು ಮಾತ್ರ ಮಣ್ಣು ಅಗೆಯಲಾಗಿದ್ದು, ಇನ್ನೂ ಸುಮಾರು 7 ರಿಂದ 8 ಅಡಿ ಆಳ ಅಗೆದರೆ ಏನಾದರೂ ಅವಶೇಷಗಳು, ಆಭರಣ, ವಸ್ತುಗಳು ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಪುರಾತತ್ವ ಇಲಾಖೆ, ಜಿಲ್ಲಾಡಳಿತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಉತ್ಖನನ ಆರಂಭವಾಗಿದೆ. ನಿಧಿ ಸಿಕ್ಕಿರುವ ಬೆನ್ನಲ್ಲೆ ಉತ್ಖನನ ನಡೆಯುತ್ತಿರುವುದು ಕಾಕತಾಳೀಯ. ಸರ್ಕಾರ ಪೂರ್ವ ನಿಗದಿಯಂತೆ ಉತ್ಖನನ ಕಾರ್ಯ ಮಾಡುತ್ತಿದ್ದು, ಭೂಮಿಯ ಒಡಲಿನಲ್ಲಿ ಏನಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ದೇವಸ್ಥಾನದ ಕುರುಹು ಇರುವ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಉತ್ಖನನಕ್ಕೆ ಚಾಲನೆ ಸಿಕ್ಕಿದೆ. ಉತ್ಖನನ ಏನು ಸಿಗುತ್ತದೆ ಎಂದು ಕಾಯ್ದು ನೋಡಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಪಿಡಿಒ ಅಮೀರ ನಾಯ್ಕ ಸೇರಿ ಹಲವರಿದ್ದರು.

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನಕ್ಕೂ ಮುನ್ನ ಉತ್ಖನನದ ಜಾಗೆ ಹಾಗೂ ಉತ್ಖನನಕ್ಕೆ ಬೇಕಾಗುವ ಸಲಕರಣಗೆಳಿಗೆ ಪೂಜೆ ಸಲ್ಲಿಸಲಾಯಿತು. ನಂತರ 20 ಜನ ಮಹಿಳೆಯರು, 10 ಜನ ಪುರುಷರು ಸೇರಿ ಒಟ್ಟು 30 ಕಾರ್ಮಿಕರಿಂದ ಉತ್ಖನನ ಪ್ರಕ್ರಿಯೆ ಆರಂಭವಾಯಿತು.


ಗ್ರಾಮದ ಸ್ಥಳಾಂತರ ಉತ್ಖನನದಲ್ಲಿ ಸಿಗುವ ಕುರುಹುಗಳ ಮೇಲೆ ನಿರ್ಧಾರವಾಗುತ್ತದೆ. ಉತ್ಖನನದಲ್ಲೆ ಅಂಥದ್ದೇನಾದ್ರೂ ಕಂಡು ಬಂದಲ್ಲಿ ಸ್ಥಳಾಂತರ ಮಾಡುತ್ತೇವೆ. ಗ್ರಾಮದ ಜನರಿಗೆ ಸಂಪೂರ್ಣ ಸಹಕಾರದಿಂದ ಉತ್ಖನನ ನಡೆಯುತ್ತಿದೆ. ಭೂತಾಯಿ ಒಡಲೋಳಗೆ ಏನು ಹುದುಗಿದೆಯೋ ನೋಡಬೇಕು.

-ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ.
WhatsApp Group Join Now
Telegram Group Join Now
Share This Article