ಮುಗಳಖೋಡ : ನಮ್ಮ ಆದ್ಯಾತ್ಮಿಕ ಪರಂಪರೆಯಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಠಗಳು, ಮಠಾಧೀಶರ ಮಾರ್ಗದರ್ಶನದಿಂದಾಗಿಯೇ ನಮ್ಮ ಸಮಾಜ ಸನ್ಮಾರ್ಗದಲ್ಲಿ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ರಾಯಬಾಗ ತಾಲೂಕಿನ ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡ ಬೃಹನ್ಮಠದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 40ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ಕಾರ್ಯ ಮಠಗಳಿಂದ ಆಗುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ಸುಸಂಸ್ಕೃತ ಸಮಾಜ ನಿರ್ಮಾಣವಾಗಿದೆ. ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನದಾಸೋಹಗಳ ಮೂಲಕ ಬಡ ಮಕ್ಕಳಿಗೂ ಕಲಿಯುವ ಅವಕಾಶವನ್ನು ಕಲ್ಪಿಸಿದ್ದು ನಮ್ಮ ಮಠಗಳು. ಸರಕಾರದಿಂದ ಮಾಡಲಾಗದಂತಹ ಮಹತ್ಕಾರ್ಯವನ್ನು ಮಠಗಳು, ಧಾರ್ಮಿಕ ಸಂಸ್ಥೆಗಳು ಮಾಡುತ್ತ ಬಂದಿವೆ. ಮಠ ಮಾನ್ಯಗಳು, ಧಾರ್ಮಿಕ ಸಂಸ್ಥೆಗಳು ನಮ್ಮ ಭಾಗದಲ್ಲಿ ಸರಕಾರಕ್ಕೆ ಸಮಾನಾಂತರವಾಗಿ ಶೈಕ್ಷಣಿಕ ಸೇವೆಯನ್ನು ನೀಡುತ್ತ ಬಂದಿವೆ ಎಂದು ಅವರು ಹೇಳಿದರು.
ಭಾರತ ದೇಶ ಆದ್ಯಾತ್ಮ ಪರಂಪರೆಯ ದೇಶ. ಇಲ್ಲಿ ನಾವು ಇಷ್ಟು ಅನ್ಯೋನ್ಯವಾಗಿ ಇರುವುದಕ್ಕೆ ಮಠ ಮಾನ್ಯಗಳು ನಮ್ಮನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವುದೇ ಕಾರಣ. ದಾಸೋಹ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹಾಪುಣ್ಯಾತ್ಮರು ಯಲ್ಲಾಲಿಂಗ ಮಹಾಸ್ವಾಮಿಗಳು. ಅವರು ಮಾಡಿದ ಅಂಬಲಿ ದಾಸೋಹ ಸೇರಿದಂತೆ ಎಲ್ಲ ಪುಣ್ಯ ಕಾರ್ಯಗಳನ್ನು ನೆನಪಿಸಿಕೊಂಡು, ಇರುವಷ್ಟು ದಿನ ಪೂಜ್ಯರ ಮಾರ್ಗದರ್ಶನದಲ್ಲಿ, ಧೀನ ದಲಿತರಿಗೆ, ದುರ್ಬಲರಿಗೆ ಸಹಾಯ ಮಾಡುತ್ತ ಧರ್ಮದ ಮಾರ್ಗದಲ್ಲಿ ನಡೆಯೋಣ. ನಮ್ಮ ಪರಂಪರೆ, ಇತಿಹಾಸವನ್ನು ನಮ್ಮ ಯುವ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಚನ್ನರಾಜ ಹೇಳಿದರು.
ಕಾರ್ಯಕ್ರಮದಲ್ಲಿ ಮುಗಳಖೋಡ-ಜಿಡಗಾ ಮಠದ ಪರಮಪೂಜ್ಯ ಶ್ರೀ ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಶೇಗುಣಸಿ ಮಠದ ಶ್ರೀ ಮಹಾಂತ ಪ್ರಭು ಮಹಾಸ್ವಾಮಿಗಳು, ಸಚಿವರಾದ ಶಿವಾನಂದ ಪಾಟೀಲ, ಶಾಸಕರಾದ ಮಹೇಂದ್ರ ತಮ್ಮಣ್ಣವರ್, ಶಶಿಕಲಾ ಜೊಲ್ಲೆ, ಬಿ.ವಾಯ್ ವಿಜಯೇಂದ್ರ, ಮಾಜಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ರಮೇಶ ಕತ್ತಿ, ಹಲವಾರು ಶಾಸಕರು, ಗಣ್ಯರು, ಮಠದ ಭಕ್ತಾಧಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


