ಶ್ರೀ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವೈಭವದ ಪಡಿಪೂಜೆ ಆಚರಣೆ
ಬಳ್ಳಾರಿ,ಜ.16. ನಗರದ ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಜನವರಿ 14ರಂದು ಶಬರಿಮಲೆ ಸಂಪ್ರದಾಯದಂತೆ ವಿಶೇಷ 18 ಮೆಟ್ಟಿಲುಗಳ ಪಡಿಪೂಜೆ ಶ್ರದ್ಧಾ–ಭಕ್ತಿ ಭಾವದಿಂದ ವೈಭವವಾಗಿ ಜರುಗಿತು.
ಕೇರಳ ಮೂಲದ ಪ್ರಸಿದ್ಧ ತಂತ್ರಿಗಳಾದ ಬ್ರಹ್ಮಶ್ರೀ ಶ್ರೀರಂಗಂ ಸರುಣ್ಮ ಮೋಹನ್ ತಂತ್ರಿ ಸ್ವಾಮಿಜಿಯವರ ನೇತೃತ್ವದಲ್ಲಿ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ಗುಪ್ತ ಅವರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.

ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಸಂಜೆ 7 ಗಂಟೆಯಿಂದ ಆರಂಭಗೊಂಡು, ಕೇರಳದ ಶಬರಿಮಲೆ ಕ್ಷೇತ್ರದಲ್ಲಿ ನಡೆಯುವಂತೆಯೇ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಡಿಪೂಜೆ ನೆರವೇರಿಸಲಾಯಿತು. ಭಕ್ತಿಭಾವದಿಂದ ನಡೆದ ಈ ಪೂಜೆಯಲ್ಲಿ ಅನೇಕ ಭಕ್ತರು ಭಾಗವಹಿಸಿ ಪುಣ್ಯ ಸಂಪಾದಿಸಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.


