ಗಲಭೆ ಪ್ರಕರಣದಲ್ಲಿ ಸರ್ಕಾರ ಮೃದು ನಿಲುವು ತಾಳುತ್ತಿರುವುದು ಖಂಡನೀಯ : ಬಿ.ಶ್ರೀರಾಮುಲು

Hasiru Kranti
ಗಲಭೆ ಪ್ರಕರಣದಲ್ಲಿ ಸರ್ಕಾರ ಮೃದು ನಿಲುವು ತಾಳುತ್ತಿರುವುದು ಖಂಡನೀಯ : ಬಿ.ಶ್ರೀರಾಮುಲು
WhatsApp Group Join Now
Telegram Group Join Now
ಬಳ್ಳಾರಿ, ಜ.14: ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ನಗರದ ಸಿರುಗುಪ್ಪ ರಸ್ತೆ ಪ್ರದೇಶದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ನಿವಾಸದ ಎದುರಿನ ಗ್ಲಾಸ್ ಹೌಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾನರ್ ಗಲಭೆ ಪ್ರಕರಣದಲ್ಲಿ ರಾಜಶೇಖರ್ ಎಂಬ ಯುವಕನ ಸಾವಿನ ವಿಚಾರವನ್ನು ಸರ್ಕಾರ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡಕ್ಕೆ ಅಗತ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗಿದೆ. ಆದರೆ ನ್ಯಾಯಯುತ ತನಿಖೆ ನಡೆಸುವ ಬದಲು ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾನರ್ ಅಳವಡಿಕೆ ವೇಳೆ ನಡೆದ ಗಲಭೆಯ ಐದು ದಿನಗಳ ಬಳಿಕ ಬುಲೆಟ್ ಹುಡುಕಾಟ ನಡೆಸಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥತೆಯನ್ನು ಸ್ಪಷ್ಟಪಡಿಸುತ್ತದೆ. ಇಂತಹ ವಿಳಂಬ ಕ್ರಮಗಳಿಂದ ಸತ್ಯ ಹೊರಬರದಂತೆ ಮಾಡಲು ಸರ್ಕಾರ ಉದ್ದೇಶಪೂರ್ವಕವಾಗಿ ನಡೆದುಕೊಳ್ಳುತ್ತಿದೆ ಎಂಬ ಅನುಮಾನಗಳು ಮೂಡುತ್ತಿವೆ ಎಂದು ಶ್ರೀರಾಮುಲು ಹೇಳಿದರು.
ಗಾಂಜಾ ಪೆಡ್ಲರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆದರೆ ಮಾನವ ಜೀವ ಕಳೆದುಕೊಂಡ ಗಲಭೆ ಪ್ರಕರಣದಲ್ಲಿ ಸರ್ಕಾರ ಮೃದು ನಿಲುವು ತಾಳುತ್ತಿರುವುದು ಖಂಡನೀಯ ಎಂದು ಅವರು ಟೀಕಿಸಿದರು.
ರಾಜಶೇಖರ್ ಸಾವಿನ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಹಾಗೂ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ತಿಂಗಳ 17ರಂದು ಬಳ್ಳಾರಿಯಲ್ಲಿ ಮಹಾಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಅನಂತಪುರ ರಸ್ತೆ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಧಿಕೃತ ಚಾಲನೆಯಾಗಲಿದೆ ಎಂದು ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಹಾಗೂ ರಾಜಶೇಖರ್ ಸಾವಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಬಳ್ಳಾರಿಯಿಂದ ಬೆಂಗಳೂರುವರೆಗೆ ಸುಮಾರು 20 ದಿನಗಳ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಪಾದಯಾತ್ರೆಗೆ ಅಗತ್ಯವಿರುವ ರೂಟ್ ಮ್ಯಾಪ್ ಸಿದ್ಧವಾಗಿದ್ದು, ಕೇಂದ್ರ ನಾಯಕರು ಸೇರಿದಂತೆ ಪಕ್ಷದ ಹಿರಿಯರ ಬೆಂಬಲ ದೊರಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅನುಮತಿ ದೊರೆತ ತಕ್ಷಣ ಪಾದಯಾತ್ರೆ ಆರಂಭವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಹಾಗೂ ಹಿರಿಯ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ರಾಯಚೂರಿನ ಮಾಜಿ ಸಂಸದ ಸಣ್ಣಪಕೀರಪ್ಪ, ಕಂಪ್ಲಿಯ ಮಾಜಿ ಶಾಸಕ ಟಿ.ಹೆಚ್.ಸುರೇಶ್‌ಬಾಬು, ಪಕ್ಷದ ಮುಖಂಡರಾದ ಓಬಳೇಶ್, ಎಸ್.ಗುರುಲಿಂಗನಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article