ಶಾಲಾ ಮಕ್ಕಳೊಂದಿಗೆ ಭೋಜನ ಸವಿದ ಸಿಇಓ

Hasiru Kranti
ಶಾಲಾ ಮಕ್ಕಳೊಂದಿಗೆ ಭೋಜನ ಸವಿದ ಸಿಇಓ
WhatsApp Group Join Now
Telegram Group Join Now

“ಕಾಯಕ ಗ್ರಾಮ” ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ

“ಕಾಯಕ ಗ್ರಾಮ” ಬನ್ನೂರಗೆ ಭೇಟಿ ನೀಡಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ್ ಶಿಂಧೆ

ಬೆಳಗಾವಿ: ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು “ಕಾಯಕ ಗ್ರಾಮ” ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿರುವ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ, ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮದ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಗ್ರಾಮ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಕಾಯಕ ಗ್ರಾಮ” ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಹಾಗೂ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಇ-ಆಡಳಿತ ವಿಭಾಗವು ಸಿದ್ಧಪಡಿಸಿರುವ Gram Panchayat Performance Ranking ನಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯತಿಗಳನ್ನು ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ, ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ ಆಯೋಜನೆ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು “ಕಾಯಕ ಗ್ರಾಮ” ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ 15 ದಿನದೊಳಗಾಗಿ ಗ್ರಾಮಸಭೆಯನ್ನು ಆಯೋಜಿಸಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತೀರ್ಮಾನಿಸಿ ನಿರ್ಣಯ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು ಹಾಗೂ ಅಗತ್ಯ ಯೋಜನೆ ರೂಪಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಭರವಸೆ ನೀಡಿದರು.

ಶಾಲಾ ಮಕ್ಕಳೊಂದಿಗೆ ಭೋಜನ ಸವಿದ ಸಿಇಓ
ಸಿಇಓ ರಾಹುಲ್ ಶಿಂಧೆ ಅವರು ಗ್ರಾಮದ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟವನ್ನು ಸವಿದರು. ಮಕ್ಕಳು ಸಿಇಓ ರವರೊಂದಿಗೆ ಭೋಜನ ಸವಿದು ಸಂತಸಪಟ್ಟರು. ಶಾಲೆಯಲ್ಲಿನ ಕುಂದುಕೊರತೆಗಳು ಬಗ್ಗೆ ಮಾಹಿತಿ ಪಡೆದರು. ಪ್ರತಿದಿನ ಶುಚಿತ್ವ ಹಾಗೂ ಗುಣಮಟ್ಟದ ಬಿಸಿಯೂಟ ತಯಾರಿಸಲು ಸೂಚನೆ ನೀಡಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿಯ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಜೆಜೆಎಮ್ ಕಾಮಗಾರಿಯನ್ನು ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವಂತೆ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು. ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಗ್ರಾಪಂ ವ್ಯಾಪ್ತಿಯ ಎನ್.ಆರ್.ಎಲ್.ಎಮ್. ಯೋಜನೆಯ ಸ್ವಸಹಾಯ ಸಂಘದ ಮಹಿಳೆಯರು ಕೈಯ್ಯಿಂದ ಸಿದ್ಧಪಡಿಸಿರುವ ವಿವಿಧ ಬಟ್ಟೆಗಳು ಹಾಗೂ ವಸ್ತುಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್, ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ್ (ಆಡಳಿತ), ಬಸವರಾಜ ಅಡವಿಮಠ (ಅಭಿವೃದ್ಧಿ), ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರೆ, ಸಹಾಯಕ ನಿರ್ದೇಶಕರಾದ ಸೋಮರಡ್ಡಿ ಹೊಂಗಲ, ಮಾಲತೇಶ್ ದಾಸಪ್ಪನವರ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪೂಜಾರ, ಪಿಡಿಓ ಶ್ರೀದೇವಿ ಮಡಿವಾಳ ಸೇರಿ ವಿವಿಧ ಇಲಾಖೆಯ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

WhatsApp Group Join Now
Telegram Group Join Now
Share This Article