ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು : ಕೂಡಲೇ ಖಾಯಂ ಅಧಿಕಾರಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

Hasiru Kranti
ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳು : ಕೂಡಲೇ ಖಾಯಂ ಅಧಿಕಾರಿಗಳ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ
WhatsApp Group Join Now
Telegram Group Join Now
ಕಾಮಗಾರಿಗಳ ಬಿಲ್ಲ್ ಪಾವತಿಗಾಗಿ ಆಗ್ರಹಿಸಿ ಗುತ್ತಿಗೆದಾರರಿಂದ ಪ್ರತಿಭಟನೆ
 ಅಥಣಿ ಹೆಸ್ಕಾಂ ಕಚೇರಿಯಲ್ಲಿ ಕರ್ತವ್ಯಕ್ಕೆ ಬಾರದ ಅಧಿಕಾರಿ ಮತ್ತು ಸಿಬ್ಬಂದಿ..!
 ಸಾರ್ವಜನಿಕರಿಗೆ, ರೈತರಿಗೆ, ಗುತ್ತಿಗೆದಾರರಿಗೆ ತಪ್ಪದ ನಿತ್ಯ ಪರದಾಟ..!
ಅಥಣಿ: ಇಲ್ಲಿನ ಹೆಸ್ಕಾಂ ವಿಭಾಗಿಯ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದೆ  ವಿವಿಧ ವಿದ್ಯುತ್ ಕಾಮಗಾರಿಗಳನ್ನು ಕೈಗೊಂಡ ಗುತ್ತಿಗೆದಾರರಿಗೆ ಬಿಲ್ ಗಳಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗುತ್ತಿಲ್ಲ,  ಕೂಡಲೇ ಖಾಯಂ ಅಧಿಕಾರಿಗಳನ್ನು, ಲೆಕ್ಕಾಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮಂಗಳವಾರ  ಹೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ವಿದ್ಯುತ್ ಗುತ್ತಿಗೆದಾರರ ಸಂಘದ ಹಿರಿಯ ಸದಸ್ಯ ಭೀಮನಗೌಡ ಪಾಟೀಲ ಮಾತನಾಡಿ ಈ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ರೀತಿಯ ವಿದ್ಯುತ್ ಸೇವೆಗಳು ದೊರಕಲಿ ಎಂಬ ಉದ್ದೇಶದಿಂದ ಇಲ್ಲಿ ಹೆಸ್ಕಾಂ ಕಚೇರಿಯ ವಿಭಾಗೀಯ ಕಚೇರಿಯನ್ನು ಆರಂಭಿಸಲಾಗಿದ್ದು, ಆದರೆ ಇಲ್ಲಿ  ಅನೇಕ ವರ್ಷಗಳಿಂದ ಖಾಯಂ ಅಧಿಕಾರಿಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆಗಳು ದೊರಕುತ್ತಿಲ್ಲ.  ಹೆಚ್ಚುವರಿಯಾಗಿ ನೇಮಿಸಿರುವ ಅಧಿಕಾರಿಗಳು, ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಬರದೇ ಇರುವುದರಿಂದ ಸಾರ್ವಜನಿಕರಿಗೆ ಮತ್ತು ರೈತ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಇದರ ಜೊತೆಗೆ ವಿವಿಧ ವಿದ್ಯುತ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಿಲ್ ಪಾವತಿಗಾಗಿ ಕಳೆದ 5 ವರ್ಷಗಳಿಂದ ಪರದಾಡುತ್ತಿರುವ ಗುತ್ತಿಗೆದಾರರ ಕಡತಗಳು ಇನ್ನೂ ವಿಲೇವಾರಿ ಆಗುತ್ತಿಲ್ಲ. ಇಲ್ಲಿನ ಕಚೇರಿಯ ಲೆಕ್ಕಾಧಿಕಾರಿಗಳು ಕರ್ತವ್ಯಕ್ಕೆ ಬರುತ್ತಿಲ್ಲ, ಅವರನ್ನ ಕೂಡಲೇ ಬೇರಡಗೆ ವರ್ಗಾಯಿಸಿ ಇಲ್ಲಿ ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.
 ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅನಿಲ ಒಡೆಯರ ಮಾತನಾಡಿ ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ದಕ್ಷ ಮತ್ತು ಖಾಯಂ ಅಧಿಕಾರಿಗಳು ಇಲ್ಲದೇ ಇರುವುದರಿಂದ ಇಲ್ಲಿನ ಸಿಬ್ಬಂದಿಗಳು ಕೂಡ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೊರಗಡೆ ಹೋಗುತ್ತಿದ್ದಾರೆ. ಇವರಿಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಸೇವೆಗಳು ಸಕಾಲಕ್ಕೆ ದೊರಕದೇ ದಿನನಿತ್ಯ ಕಚೇರಿಗೆ  ಅಲೆದಾಡುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿ ರಾಶಿ ರಾಶಿ ಕಡತಗಳು ವಿಲೇವಾರಿಯಾಗಲಿ ಬಾಕಿ ಉಳಿದುಕೊಂಡಿವೆ. ಈ ಬಗ್ಗೆ ಲಿಖಿತ ದೂರ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ನಮ್ಮ ಸಂಘದ ಗುತ್ತಿಗೆದಾರರ ಅನೇಕ ಕಡತಗಳು ಕಳೆದ ಐದು ವರ್ಷಗಳಿಂದ ವಿಳಂಬವಾಗಿವೆ. ಅವರು ವಿವಿಧಡೆ ಸಾಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಬಿಲ್ ಪಾವತಿಯಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಆದ್ದರಿಂದ ಈ ಹೋರಾಟ ಮಾಡುವುದು ನಮಗೆ ಅನಿವಾರ್ಯ ವಾಗಿದೆ. ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ವ್ಯವಸ್ಥಾಪಕರು ಕೂಡಲೇ ಇಲ್ಲಿ ಅಧಿಕಾರಿಗಳನ್ನು ನೇಮಿಸಬೇಕು, ನಮ್ಮ ಕಡತಗಳನ್ನು ಬೇಗನೆ ವಿಲೇವಾರಿ ಮಾಡಬೇಕು ಎಂದು ಅಗ್ರಹಿಸಿದರು.
 ಅಧಿಕಾರಿಗಳ ಭರವಸೆ : ಪ್ರತಿಭಟನೆ ತಾತ್ಕಾಲಿಕ  ಅಂತ್ಯ 
ಅಥಣಿ ಹೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಗುತ್ತಿಗೆದಾರರು ನಡೆಸುತ್ತಿದ್ದ ಹೋರಾಟ ಸ್ಥಳಕ್ಕೆ ಕಚೇರಿಗೆ ಸಹಾಯಕ ಅಭಿಯಂತರ ಎ.ಎಸ್. ಮಾಕಾಣಿ ಆಗಮಿಸಿ ಪ್ರತಿಭಟನಾಕಾರರು ಸಮಸ್ಯೆಗಳನ್ನು ಆಲಿಸಿ ಕಚೇರಿಯಲ್ಲಿ ವಿವಿಧ ಕಾಮಗಾರಿಗಳ ಬಿಲ್ ಗಳಿಗೆ ಸಂಬಂಧಿಸಿದ ಕಡತಗಳ ವಿಲೆವಾರಿಗೆ ಈಗಾಗಲೇ ನಿಯೋಜನೆಗೊಂಡಿರುವ ಲೆಕ್ಕಾಧಿಕಾರಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸಕಾಲಕ್ಕೆ ಆಗಮಿಸದೆ ಇರುವುದರಿಂದ ಬಹಳ ತೊಂದರೆಯಾಗುತ್ತಿದೆ. ಈ ವಿಷಯವನ್ನು ಮೇಲಾಧಿಕಾರಗಳ ಗಮನಕ್ಕೆ ತಂದು ಒಂದೆರಡು ದಿನಗಳಲ್ಲಿ ಖಾಯಂ ಲೆಕ್ಕಾಧಿಕಾರಿಯನ್ನ ನೇಮಿಸಲಾಗುವುದು, ಕಚೇರಿಯ ಎಲ್ಲ ಸಿಬ್ಬಂದಿಗಳ ಸಭೆ ನಡೆಸಿ ಕಚೇರಿ ವೇಳೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.
 ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತ ಎ. ಎಸ್. ಮಾಕಾಣಿ ಅವರ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದ ವಿದ್ಯುತ್ ಗುತ್ತಿಗೆದಾರರು ಒಂದೆರಡು ದಿನಗಳಲ್ಲಿ ಬೇರೆ ಲೆಕ್ಕಾಧಿಕಾರಿಗಳನ್ನು ನೇಮಿಸಿ ಕಡತಗಳನ್ನ ವಿಲೇವಾರಿ ಮಾಡಬೇಕು, ಮತ್ತೆ ವಿಳಂಬ ನೀತಿ ಅನುಸರಿಸಿದರೆ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆದರು.
 ಈ ಸಂದರ್ಭದಲ್ಲಿ ಗಿರೀಶ್ ವಿಜಾಪುರೆ, ಪಾರಿಶ್ ನಂದಪ್ಪನವರ, ಶೌಕತ್ ಅಲಿ ಮುಕ್ಕೇರಿ, ದ್ವಾರಕಿಶ ಜಾಲಿಹಾಳ, ಸಂಗಮೇಶ ನಾರಗೊಂಡ, ಅಶೋಕ ಪೋಳ ಸೇರಿದಂತೆ  ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಅಥಣಿ ಹೆಸ್ಕಾಂ ಕಚೇರಿಯಲ್ಲಿ  ಅಧಿಕಾರಿಗಳ ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಮತ್ತು ವಿದ್ಯುತ್ ಗುತ್ತಿಗೆದಾರರಿಗೆ  ಸಮಸ್ಯೆಯಾಗುತ್ತಿದೆ. ವಿದ್ಯುತ್ ಕಾಮಗಾರಿಗೆ ಸಂಬಂಧಿಸಿದ ಅನೇಕ ಕಡತಗಳು ವಿಲೇವಾರಿಯಾಗದೆ ವಿಳಂಬಗೊಂಡಿವೆ. ಕೂಡಲಿ ಇಲ್ಲಿನ ಕಚೇರಿಗೆ ಲೆಕ್ಕಾಧಿಕಾರಿಗಳನ್ನು ನೇಮಿಸಬೇಕು.
 – ಜಗದೀಶ್ ಅವಟಿ, ಅಧ್ಯಕ್ಷರು, 
ವಿದ್ಯುತ್ ಗುತ್ತಿಗೆದಾರರ ಸಂಘ ಅಥಣಿ.

 ವಿದ್ಯುತ್ ಗುತ್ತಿಗೆದಾರರ  ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ  ನಿಯೋಜನೆಗೊಂಡಿರುವ ಲೆಕ್ಕಾಧಿಕಾರಿ ಕರ್ತವ್ಯಕ್ಕೆ ಗೈರಾಗುತ್ತಿರುವ  ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೂಡಲೇ  ಖಾಯಂ ಲೆಕ್ಕಾಧಿಕಾರಿಯನ್ನು ಶೀಘ್ರದಲ್ಲಿಯೇ ನೇಮಿಸಿ ವಿಳಂಬವಾಗಿರುವ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಕೆಲವು ಅಧಿಕಾರಿಗಳು ವಿಚಾರಣೆ ನಿಮಿತ್ಯ ಹೊರಗಡೆ ಹೋಗಿರುತ್ತಾರೆ, ಇರುವ ಸಿಬ್ಬಂದಿಯಲ್ಲಿ ಹೊಂದಾಣಿಕೆ ಮಾಡಿಕೊಂಡು  ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದ್ದೇವೆ.
 –  ಜಿ. ವಿ ಸಂಪನ್ನವರ, ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ 
 ಹೆಸ್ಕಾಂ ಅಥಣಿ.
WhatsApp Group Join Now
Telegram Group Join Now
Share This Article