ಸುಗ್ಗಿ ಸಂಕ್ರಾಂತಿ (ಮಕರ ಸಂಕ್ರಾಂತಿ)

Hasiru Kranti
ಸುಗ್ಗಿ ಸಂಕ್ರಾಂತಿ (ಮಕರ ಸಂಕ್ರಾಂತಿ)
WhatsApp Group Join Now
Telegram Group Join Now
ಮಕರ ಸಂಕ್ರಾಂತಿ ಎಂಬ ಹೆಸರೇ ಸೂಚಿಸುವಂತೆ. ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿ ಮಕರ ರಾಶಿಗೆ ಪ್ರವೇಶಿಸುವ ದಿನವೇ ಈ ಹಬ್ಬ, ಇದು ದೀರ್ಘ ಹಗಲುಗಳನ್ನು ಸೂಚಿಸುವ ಮಹತ್ಯದ ದಿನವಾಗಿದ್ದು, ದಕ್ಷಿಣ ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬವಾಗಿದೆ. ಈ ಹಬ್ಬವು ಧಾರ್ಮಿಕ ತತ್ತ್ವ. ವೇದಾಂಗ ಜ್ಯೋತಿಷ್ಯಶಾಸ್ತ್ರ ಹಾಗೂ ಖಗೋಳಶಾಸ್ತ್ರದ ತಳಹದಿಯನ್ನು ಹೊಂದಿದೆ.
ಈ ಹಬ್ಬ ಯುಗಯುಗಾಂತರಗಳಿಂದ ಆಚರಣೆಯಲ್ಲಿದ್ದು, ಸಂಪ್ರದಾಯ. ಪುರಾಣ ಮತ್ತು ಕೃಷಿ ಮಹತ್ವಗಳ ಸುಂದರ ಸಮ್ಮಿಲನವಾಗಿದೆ. ಸಂಕ್ರಾಂತಿಯನ್ನು ಪಂಜಾಬ್‌ನಲ್ಲಿ ಲೋಹಿ, ತಮಿಳುನಾಡಿನಲ್ಲಿ ಪೊಂಗಲ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಇದು ಕೃಷಿಯಲ್ಲಿ ಸುಗ್ಗಿಯ ಆರಂಭವನ್ನು ಸೂಚಿಸುವ ಹಬ್ಬವಾಗಿದ್ದು, ರೈತರು ಫಲಪ್ರದ ಇಳುವರಿಗಾಗಿ ಕೃತಜ್ಞತೆ ಸಲ್ಲಿಸಿ ಸಮೃದ್ಧ ಭವಿಷ್ಯಕ್ಕಾಗಿ ಆಶೀರ್ವಾದ ಕೋರುತ್ತಾರೆ.
ಜ್ಯೋತಿಷ್ಯಶಾಸ್ತ್ರದ ತಳಹದಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಈ ದಿನ ಸಾಮಾನ್ಯವಾಗಿ ಪ್ರತಿವರ್ಷ ಗ್ರೆಗೋರಿಯನ್ ಕ್ಯಾಲೆಂಡರ್‌ನ ಜನವರಿ ೧೪ರ ಸುಮಾರಿಗೆ ಬರುತ್ತದೆ. ಇದು ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುತ್ತದೆ. ಇದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿಗಾಲ ಕಡಿಮೆಯಾಗಿ ಬೆಚ್ಚನೆಯ ವಾತಾವರಣ ಆರಂಭವಾಗುತ್ತದೆ.
ಖಗೋಳಶಾಸ್ತ್ರದ ತಳಹದಿ
ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಖಗೋಳೀಯ ಘಟನೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯದಲ್ಲಿ, ಸೂರ್ಯನ ಕಿರಣಗಳು ಮಕರ ರೇಖೆಯ ಮೇಲೆ ಲಂಬವಾಗಿ ಬೀಳುತ್ತವೆ. ಸೂರ್ಯ ಭೂಮಿಯ ಉತ್ತರ ಗೋಳಾರ್ಧದ ಕಡೆಗೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಇದು ಚಳಿಗಾಲದ ಅಂತ್ಯ ಮತ್ತು ಹಗಲಿನ ಅವಧಿ ಹೆಚ್ಚಾಗುವುದನ್ನು ಸೂಚಿಸುತ್ತದೆ.
ಧಾರ್ಮಿಕ ತಳಹದಿ
ಧಾರ್ಮಿಕವಾಗಿ ಸಂಕ್ರಾಂತಿ ಹಿಂದೂ ಪುರಾಣಗಳಿಂದ ಪ್ರೇರಿತವಾಗಿದೆ. ಈ ದಿನ ವಿಷ್ಣುವು ದುಷ್ಟಶಕ್ತಿಯ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವಂತೆ ಶಂಕರಾಸುರನನ್ನು ಸಂಹರಿಸಿದನೆಂದು ನಂಬಲಾಗಿದೆ. ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಈ ವಿಜಯವನ್ನು ಆಚರಿಸುತ್ತಾರೆ.
ಸುಗ್ಗಿಕಾಲದ ಸಂಕೇತ
ಸಂಕ್ರಾಂತಿ ಒಂದು ಗ್ರಾಮೀಣ ಹಬ್ಬ. ಬೆಳೆದ ಬೆಳೆಯನ್ನು ಕಟಾವು ಮಾಡಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಇದಾಗಿದೆ. ಬೆಳೆಯನ್ನು ಕಣದಲ್ಲಿ ಒಟ್ಟುಗೂಡಿಸಿ. ಸಗಣಿಯನ್ನು ಸಣ್ಣ ತ್ರಿಭುಜಾಕಾರದಲ್ಲಿ ರೂಪಿಸಿ. ಗರಿಕೆ ಚುಚ್ಚಿ ಫಸಲಿನ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಫಸಲಿನಿಂದ ಮಾಡಿದ ಅಡುಗೆಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ವರ್ಷವಿಡೀ ರೈತನೊಂದಿಗೆ ದುಡಿದ ಎತ್ತುಗಳನ್ನು ತೊಳೆಯಿಸಿ ಅಲಂಕರಿಸಿ ದೇವಾಲಯದ ಸುತ್ತ ಸುತ್ತಿಸಿ ಸಂಭ್ರಮಿಸುತ್ತಾರೆ.
ಪುರಾಣಗಳ ತಳಹದಿ
ಪುಷ್ಯಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಈ ಕಾಲ ಬದುಕಲು ಮಾತ್ರವಲ್ಲ, ಸಾಯಲು ಕೂಡ ಶ್ರೇಷ್ಠವೆಂದು ಹೇಳಲಾಗಿದೆ. ಆದ್ದರಿಂದ ಭೀಷ್ಮ ಪಿತಾಮಹರು ಉತ್ತರಾಯಣ ಬರುವವರೆಗೆ ಹರಿಸ್ಮರಣೆ ಮಾಡುತ್ತಾ ದೇಹತ್ಯಾಗಕ್ಕೆ ಕಾಯುತ್ತಿದ್ದರು.
ಉಪಸಂಹಾರ
ಒಟ್ಟಾರೆಯಾಗಿ ಸಂಕ್ರಾಂತಿಯು ಧಾರ್ಮಿಕವಾಗಿ, ಪೌರಾಣಿಕವಾಗಿ ಹಾಗೂ ಸುಗ್ಗಿಯ ಹಬ್ಬವಾಗಿ ಅಪಾರ ಮಹತ್ವವನ್ನು ಪಡೆದಿದೆ. ಜನರು ಎಳ್ಳು-ಬೆಲ್ಲ ಹಂಚಿಕೊಂಡು ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ’ ಎಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಗಾಳಿಪಟ ಹಾರಿಸಿ, ಧನಗಳಿಗೆ ಪೂಜೆ ಸಲ್ಲಿಸಿ ಸಂತೋಷ. ಸಮೃದ್ಧಿ ಮತ್ತು ಕೌಟುಂಬಿಕ ಬಾಂಧವ್ಯಗಳನ್ನು ಬೆಳೆಸಿಕೊಳ್ಳುತ್ತಾರೆ.
ಲೇಖಕರು:
ವಾಣಿಶ್ರೀ ಶರತ್ ಆಲದಕಟ್ಟಿ 
ಧಾರವಾಡ
WhatsApp Group Join Now
Telegram Group Join Now
Share This Article