ಬೆಳಗಾವಿ : ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ನ್ನು ಒಳ್ಳೆಯ ಕೆಲಸಕ್ಕೆ ಮಾತ್ರ ಬಳಸಬೇಕು, ಈ ಅವಧಿಯಲ್ಲಿ ಬ್ರಹ್ಮಚರ್ಯೆ, ಧ್ಯಾನವನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಜೀವನದ ತತ್ವಾದರ್ಶಗಳನ್ನು ತಪ್ಪದೇ ಪರಿಪಾಲನೆ ಮಾಡಬೇಕು ಎಂದು ಬೆಳಗಾವಿ ರಾಮಕೃಷ್ಣ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಕಿವಿಮಾತು ಹೇಳಿದರು.
ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 164 ನೇ ಜನ್ಮದಿನೋತ್ಸವದ ಪ್ರಯುಕ್ತ ಏರ್ಪಡಿಸಿದ ಯುವ ಸಮ್ಮೇಳನದಲ್ಲಿ ಅವರು ಸ್ವಾಮಿ ವಿವೇಕಾನಂದರು : ಒಂದು ಸ್ಫೂರ್ತಿ ಮತ್ತು ಮಾರ್ಗದರ್ಶಕ ಬೆಳಕು ವಿಷಯವಾಗಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಈ ನಾಲ್ಕು ಪ್ರಮುಖ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಅವರು ಜೀವನದಲ್ಲಿ ಬಹು ಎತ್ತರಕ್ಕೆ ಏರುವುದಲ್ಲದೇ ಗುರಿ ಸಾಧನೆ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿ ಜೀವನ ಅತ್ಯಮೂಲ್ಯ. ಈ ಅವಧಿಯಲ್ಲಿ ಸಾಧ್ಯವಾದರೆ ಮೊಬೈಲ್ ತ್ಯಜಿಸಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿ. ನಿಮ್ಮ ಜೀವನದ ಅತ್ಯಮೂಲ್ಯ ಅವಧಿಯನ್ನು ಹಾಳು ಮಾಡಿಕೊಳ್ಳಬೇಡಿ. ಮೊಬೈಲ್ ನಿಂದ ದೂರವಿರಿ. ಮೊಬೈಲ್ ಮೇಲೆ ನಿಯಂತ್ರಣ ಸಾಧಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಬ್ರಹ್ಮಚರ್ಯ ಅಳವಡಿಸಿಕೊಂಡು
ಸಹೋದರತೆಯನ್ನು ಆದರ್ಶವಾಗಿಸಿಕೊಳ್ಳಬೇಕು. ಧ್ಯಾನ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿ ನಮ್ಮ ಚಿಂತನೆ ಬದಲಾಯಿಸಿಕೊಂಡರೆ ನಾವು ಇಟ್ಟು ಕೊಂಡ ಗುರಿ ಸಾಧನೆ ಸುಲಭವಾಗಿ ಸಾಕಾರಗೊಳಿಸಿಕೊಳ್ಳಬಹುದುಎಂದು ಹೇಳಿದರು.
ನಾವೆಲ್ಲ ಶಕ್ತಿಯುತ ಜೀವನ ಸಾಗಿಸಬೇಕು. ನಾನು ಹಳ್ಳಿ ಹುಡುಗ. ನನಗೆ ಇಂಗ್ಲಿಷ್ ಬರಲ್ಲ ಎಂಬ ಕೀಳರಿಮೆ ಬೇಡ.
ನಾವು ಏನು ಚಿಂತನೆ ಮಾಡುತ್ತೇವೆಯೇ ಅದೇ ರೀತಿಯಲ್ಲಿ ಆಗುತ್ತೇವೆ. ದೇಶದ ಅಭಿವೃದ್ದಿಗೆ ಯುವ ಸಂಪತ್ತಿನ ಕೊಡುಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ನಮ್ಮ ದೇಶ ಇದೀಗ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಯುವಶಕ್ತಿ ಸಂಪತ್ತಾಗಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯರು ಸಾವಿರಾರು ವರ್ಷಗಳಿಂದ ಕಂಡುಕೊಂಡ ಆಧ್ಯಾತ್ಮಿಕ ವಿಚಾರಗಳನ್ನು ವಿವೇಕಾನಂದರು ಅಮೇರಿಕಾದ ವಿಶ್ವಧರ್ಮ ಸಮ್ಮೇಳನದ ಮೂಲಕ ವಿಶ್ವಕ್ಕೆ ಸಾರಿದರು. ಅದೇ ರೀತಿ ನಾವು
ನಮ್ಮ ಜೀವನದಲ್ಲಿ ಮಹಾನ್ ಉದ್ದೇಶ ಇಟ್ಟು ಕೊಂಡು ಸಾಧನೆ ಮಾಡಬೇಕು. ಎಲ್ಲಾ ದುಶ್ಚಟಗಳಿಂದ ದೂರವಿರಿ. ಜೀವನದ ಪರಮ ಗುರಿ ಸಾಧಿಸಲು ಮುಂದಾಗಬೇಕು. ಭವ್ಯ ಉದ್ದೇಶ, ಗುರಿ ಇಟ್ಟುಕೊಂಡರೆ ಸಕಲವನ್ನು ಸಾಧಿಸಬಹುದು. ಸ್ವಾಮಿ ವಿವೇಕಾನಂದರು ಅಲ್ಪಾವಧಿಯ ಜೀವಿತಾವಧಿಯಲ್ಲಿ ಮಹಾನ್ ಸಾಧನೆ ಮಾಡಿರುವ ಇತಿಹಾಸ ನಮ್ಮ ಮುಂದೆ ಇದ್ದು ಅವರು ಮುಖ್ಯವಾಗಿ ಯುವಕರನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.
ಶ್ರೀ ರಾಮಕೃಷ್ಣರು, ಸ್ವಾಮಿ ವಿವೇಕಾನಂದರ ಸಂಪರ್ಕಕ್ಕೆ ಬಂದವರ ಜೀವನ ಬದಲಾವಣೆ ಆಗಲೇಬೇಕು. ಸಾಕಷ್ಟು ಮಹನೀಯರು
ಇವರ ವಿಚಾರ ಅಳವಡಿಸಿಕೊಂಡು ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಅವರಂತೆ ನೀವೆಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಬೇಕು. ವಿವೇಕಾನಂದರರು ಯುವಕರು ಪಾಲಿಗೆ ಸದಾ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ನುಡಿದರು.
ನಿಜವಾದ ಕಲಿಕೆ ವಿಷಯವಾಗಿ ಮಾತನಾಡಿದ ಹೈದ್ರಾಬಾದ್ ಐಐಟಿಯ ಮಾಜಿ ಅಧ್ಯಾಪಕ ಡಾ.ರವೀಂದ್ರ ಗುರುವಣ್ಣವರ ಮಾತನಾಡಿ, ಅಂಕಕ್ಕಾಗಿ ಓದದೇ ವಿಷಯ ಗ್ರಹಿಸಿಕೊಂಡು ಓದಬೇಕು. ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ ಅದನ್ನು ಸಾಧಿಸುವುದು ಸಹ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಭಾರತ ಮತ್ತು ಯುವಕರಿಗೆ ಅವರ ಕರೆ ವಿಷಯವಾಗಿ ಮಾತನಾಡಿ, ಧಾರವಾಡ ತಡಕೋಡದ ವಂದೇ ಮಾತರಂ ಗುರುಕುಲಂ ಸಂಸ್ಥಾಪಕ
ಮಧುಸೂದನ್ ಮಾತನಾಡಿ, ಸ್ವಾಮಿ ವಿವೇಕಾನಂದರ ಒಂದೊಂದು ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಜೀವನ ಸಾರ್ಥಕವಾಗುತ್ತದೆ. ಒಂದು ಸಲ ವಿವೇಕಾನಂದರು ನಮ್ಮ ಜೀವನದ ಒಳಹೊಕ್ಕರೆ ಸಾಕು. ನಮ್ಮಲ್ಲಿರುವ ಆತ್ಮಶಕ್ತಿ ಸದಾ ಜಾಗೃತವಾಗಿರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಉದಯ ಪಾಟೀಲ ನಿರೂಪಿಸಿದರು. ಬೆಳಗಾವಿಯ ವಿವಿಧ ಕಾಲೇಜುಗಳ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿದ್ದರು.


