ಬಳ್ಳಾರಿ: 12..ನಗರದ ತಮ್ಮ ನಿವಾಸದ ಮುಂದೆ ನಡೆದ ಫೈರಿಂಗ್ ಘಟನೆಯ ಬಳಿಕ ನಡೆದ ವಿವಿಧ ಘಟನಾವಳಿಗಳಿಂದ ತಮಗೆ ಇದುವರೆಗೂ ಹೊರ ಬರಲು ಆಗುತ್ತಿಲ್ಲವೆಂದು ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ಆಘಾತ ಮತ್ತು ಆತಂಕದಲ್ಲಿ ಹೇಳಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಪುರಾಣ ಪ್ರಸಿದ್ಧ ಅಂಜನಾದ್ರಿ ದರ್ಶನದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಳ್ಳಾರಿಯಲ್ಲಿ ನಡೆದ ಘಟನೆ ನೆನಸಿಕೊಂಡರೆ ಮೈ ನಡುಗುತ್ತಿದೆ. ಘಟನೆ ನಡೆದು ೧೦ ದಿನ ಕಳೆದರೂ ಇನ್ನೂ ಹೊರಬರಲಾಗುತ್ತಿಲ್ಲ. ಘಟನೆ ನಡೆದಾಗ ನಾನು ಮತ್ತು ನನ್ನ ಮಗ ಮನೆಯಲ್ಲಿ ಇದ್ದೆವು. ಭರತ್ ರೆಡ್ಡಿ ಗೂಂಡಾಗಳು, ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ಮನೆ ಮೇಲೆ ಫೈರಿಂಗ್ ವಿಚಾರವಾಗಿ ತುಂಬಾ ನೊಂದಿದ್ದೇವೆ. ಘಟನೆಯ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ನಾಳೆ ತಮ್ಮ ಪತಿ, ಶಾಸಕ ಜನಾರ್ದನ್ ರೆಡ್ಡಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಯೋಗ ಕ್ಷೇಮಕ್ಕಾಗಿ ಆಂಜನೇಯ ಮೊರೆ ಹೋಗಿರುವುದಾಗಿ ತಿಳಿಸಿದರು.
ಈ ಘಟನೆ ನಡೆದ ಬಳಿಕ ಎರಡನೇ ಬಾರಿಗೆ ಆಂಜನೇಯ ಬೆಟ್ಟ ಏರಿದ ಅರುಣಾ ಲಕ್ಷ್ಮೀ ಅವರು ೫೭೫ ಮೆಟ್ಟಿಲೇರಿ ಆಂಜನೇಯನ ದರ್ಶನ ಪಡೆದರು. ಭಕ್ತರೊಂದಿಗೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಮಾತನಾಡಿ, ಬಳ್ಳಾರಿ ಶಾಸಕ ಭರತ್ ರೆಡ್ಡಿ ನಮ್ಮ ಮನೆ ಮೇಲೆ ದಾಳಿ ಮಾಡಲು ಇಂತಹ ದುಸ್ಸಾಹಾಸಕ್ಕೆ ಕೈ ಹಾಕಿದ್ದಾರೆ.
ಭರತ್ ರೆಡ್ಡಿ ಪರ ಡಿಕೆಶಿ ಅವರ ಮಾತುಗಳನ್ನು ಕೇಳಿ ಆ ಘಟನೆಯಿಂದ ಹೊರ ಬರುವುದಕ್ಕೂ ಆಗುತ್ತಿಲ್ಲ. ನನ್ನ ಪತಿಗೆ ಹಾಗೂ ನನ್ನ ಜನತೆಗೆ ಏನು ಆಗಬಾರದು. ಅದಕ್ಕೆ ನಾನು ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದಿದ್ದೇನೆ ಎಂದರು.
ಘಟನೆ ಬಳಿಕ ರೆಡ್ಡಿ ಸಹೋದರರು ಒಂದಾಗಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ಮೊದಲಿನಿಂದಲೂ ನಾವು ಒಂದಾಗಿದ್ದೇವೆ. ಮುಂದೆಯೂ ಒಂದಾಗಿರುತ್ತೇವೆ. ಘಟನೆ ಬಗ್ಗೆ ಉನ್ನತ ತನಿಖೆ ಆಗಬೇಕು. ಈ ಸರ್ಕಾರದಿಂದ ಉತ್ತಮ ತನಿಖೆ ಆಗುವುದಿಲ್ಲ. ಬೇರೆ ತನಿಖಾ ಸಂಸ್ಥೆಯಿAದ ತನಿಖೆ ಆಗಬೇಕು ಎಂದರು.


