ಸಂಕಷ್ಟ ಸಮಯದಲ್ಲಿ ಸಾಂತ್ವನ ನೀಡುವ ಶಕ್ತಿ ಜಾನಪದ ಸಾಹಿತ್ಯಕ್ಕಿದೆ : ಲೇಖಕ ಚಾಂದ್ ಬಾಷಾ

Sandeep Malannavar
ಸಂಕಷ್ಟ ಸಮಯದಲ್ಲಿ ಸಾಂತ್ವನ ನೀಡುವ ಶಕ್ತಿ ಜಾನಪದ ಸಾಹಿತ್ಯಕ್ಕಿದೆ : ಲೇಖಕ ಚಾಂದ್ ಬಾಷಾ
WhatsApp Group Join Now
Telegram Group Join Now
ಸಿರುಗುಪ್ಪ,ಜ,10. : ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಜಾನಪದ ಸಾಹಿತ್ಯವು ಜೀವನ ಮೌಲ್ಯಗಳ ಆಗರವಾಗಿದ್ದು, ಸತ್ಯ, ಸಹನೆ, ಕರುಣೆ, ಪ್ರೀತಿ ಮೊದಲಾದ ಮೌಲ್ಯಗಳನ್ನು ಒಳಗೊಂಡಿದೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯನು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ತೆಕ್ಕಲಕೋಟೆಯ ಲೇಖಕರಾದ ಚಾಂದ್ ಬಾಷಾ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಸಿರಿಗೇರಿ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ “ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ಸಾಹಿತ್ಯವೇ ಜಾನಪದ ಸಾಹಿತ್ಯವಾಗಿದ್ದು, ಕಥೆ, ಹಾಡು, ಗಾದೆ, ಒಗಟು, ಒಡಪು, ಬಯಲಾಟ ಮೊದಲಾದ ವಿವಿಧ ಪ್ರಕಾರಗಳಲ್ಲಿ ವಿಸ್ತಾರಗೊಂಡಿದೆ. ಈ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಹಾಸುಹೊಕ್ಕಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಸಿ.ಬಿ. ಚಿಲ್ಕರಾಗಿ, ಜೀವನ ಮೌಲ್ಯಗಳು ಮಾನವೀಯತೆಗೆ ಅಡಿಗಲ್ಲಾಗಿದ್ದು, ಕಾವ್ಯ, ನೃತ್ಯ, ಕಥೆ, ವೈದ್ಯಕೀಯ ಸೇರಿದಂತೆ ವಿವಿಧ ರೂಪಗಳಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ಡಾ. ತಿಪ್ಪೇರುದ್ರ ಸಂಡೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಎಚ್.ಜಿ. ವಿಶ್ವನಾಥಗೌಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಟಿ. ಮೃತ್ಯುಂಜಯಸ್ವಾಮಿ, ನಿವೃತ್ತ ಮುಖ್ಯಗುರು ರಾಣೆಪ್ಪ ಜೆ., ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಅಬ್ದುಲ್ ಹೈ ತೋರಣಗಲ್ಲು, ಸಹಾಯಕ ಪ್ರಾಧ್ಯಾಪಕ ಬಕಾಡೆ ಪಂಪಾಪತಿ ಸೇರಿದಂತೆ ಹಲವರು ಮಾತನಾಡಿದರು. ಸ್ಪಂದನ ಮತ್ತು ವಿದ್ಯಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article